68ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳು
ಕೊಲನಪಾಕ (ತೆಲಂಗಾಣ), ಜ.7- ವಿಶ್ವ ಬಂಧುತ್ವ ಮತ್ತು ಸಾಮರಸ್ಯ ಬೋಧಿಸಿದ ವೀರಶೈವ ಧರ್ಮ ಸಂಸ್ಕೃತಿಯ ಪುನರುತ್ಥಾನ ಹಾಗೂ ಬೆಳವಣಿಗೆಗಾಗಿ ಈ ಜೀವ ಯಾವಾಗಲೂ ಮುಡಿಪಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಭಾನುವಾರ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ತಮ್ಮ 68ನೇ ಜನ್ಮ ದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದೆಂದು ಸಾರಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲು ತ್ತದೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂಬ ಸಂಕಲ್ಪ ನಮ್ಮದಾಗಿದೆ.
ಶಿಥಿಲಗೊಂಡ ಸ್ವಯಂಭು ಶ್ರೀ ಸೋಮೇಶ್ವರ ದೇವಾಲಯದ ಪುನರ್ ನಿರ್ಮಾಣ ಮತ್ತು ಬರುವ ಯಾತ್ರಿಕರಿಗೆ ವಸತಿ ಸಂಕೀರ್ಣ ನಿರ್ಮಿಸಿ ಭಕ್ತರಿಗೆ ಅನುಕೂಲವಾಗುವ ಇನ್ನಷ್ಟು ಅಭಿವೃದ್ದಿ ಮಾಡುವ ಸಂಕಲ್ಪ ಕೈಗೊಂಡಿದ್ದೇವೆ. ಎಲ್ಲರೂ ಸಹಕರಿಸಿ ಕಾರ್ಯ ಮಾಡಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದು ನುಡಿದರು.
ಸಮಾರಂಭ ಉದ್ಘಾಟಿಸಿದ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಮಾತನಾಡಿ, ಜಗತ್ತಿಗೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಪಾರವಾದದ್ದು ಎಂದರು.
ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಸದಾ ಕಾಲಕ್ಕೂ ಸರ್ವರಿಗೂ ಹಿತಕಾರಿಯಾಗಿವೆ. ರಂಭಾಪುರಿ ಜಗದ್ಗುರುಗಳ ನಿರಂತರ ಶ್ರಮ ಸಾಧನೆ ಅಪೂರ್ವವಾದುದು ಎಂದರು.
`ಚಂದ್ರಜ್ಞಾನಾಗಮ’ ತೆಲುಗು ಕೃತಿಯನ್ನು ವಿಜ್ಞಾನ, ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ ಬಿಡುಗಡೆ ಮಾಡಿದರು. ಆಲೇರು ಶಾಸಕ ಬಿರ್ಲಾ ಐಲಯ್ಯ ಮತ್ತು ಭುವನಗಿರಿ ಶಾಸಕ ಅನಿತಕುಮಾರ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮೇಹಕರ ಹಿರೇಮಠದ ರಾಜೇಶ್ವರ ಶ್ರೀಗಳು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಮ್ಮಿಗನೂರು ಶ್ರೀ ವಾಮದೇವ ಮಹಂತ ಸ್ವಾಮೀಜಿ ಸೇರಿದಂತೆ 45ಕ್ಕೂ ಹೆಚ್ಚು ಜನ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿದ್ಧರಬೆಟ್ಟ ವೀರಭದ್ರ ಶ್ರೀ ಹಾಗೂ ಅಮ್ಮಿನಬಾವಿ ಅಭಿನವ ಶಾಂತಲಿಂಗ ಶ್ರೀಗಳು ನುಡಿ ನಮನ ಸಲ್ಲಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಶಿವಶರಣಪ್ಪ ಸೀರಿ, ಗುರುಪಾದಪ್ಪ ಕಿಣಗಿ, ಅಮೃತಪ್ಪ ಮಲಕಪ್ಪ ಗೌಡ, ದಯಾನಂದ ಶೀಲವಂತ, ಎಸ್.ಬಿ.ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.
ನ್ಯಾಯವಾದಿ ವಿಜಯಕುಮಾರ ಹೇರೂರ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ಪ್ರಾರ್ಥಿಸಿದರು. ದೇವಾಪುರ ಶಿವಮೂರ್ತಿ ಶಿವಾಚಾರ್ಯರು ನಿರೂಪಿಸಿದರು.