ರೇಣುಕಾಚಾರ್ಯ ಸೇರಿ ಹಲವರ ಬಂಧನ-ಬಿಡುಗಡೆ
ದಾವಣಗೆರೆ, ಜ.8- ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಸೋಮವಾರ ನಗರದ ಬಡಾವಣೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ಸೋಮವಾರ ನಡೆದಿದೆ.
`ನಾವು ಕರಸೇವಕರು ನಮ್ಮನ್ನು ಬಂಧಿಸಿ’ ಅಭಿಯಾನದ ಭಾಗವಾಗಿ ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರದಿಂದ ಬಡಾವಣೆ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಅವರನ್ನು ಬಂಧಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣಕ್ಕೆ ಕರೆದೊಯ್ದು ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ರಾಜ್ಯ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. 30 ವರ್ಷಗಳ ಹಿಂದಿನ ಪ್ರಕರಣವನ್ನು ಕೆದಕಿ ತೆಗೆದು, ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಕರ ಸೇವಕರಿಗೆ ತೊಂದರೆ ಕೊಡುತ್ತಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಲಕ್ಷಾಂತರ ಕರ ಸೇವಕರು ಅನೇಕ ಹೋರಾಟ ನಡೆಸಿದ್ದಾರೆ. ಅವರಲ್ಲಿ ನಾನೂ ಒಬ್ಬ. ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲ ಕರ ಸೇವಕರನ್ನು ಬಂಧಿಸಿ ಎಂದು ಸವಾಲು ಹಾಕಿದರು. ನಾವು ಹಿಂದೂಗಳು ಶಾಂತಿಪ್ರಿಯರು. ಹೋರಾಟಕ್ಕಾಗಿ ಲಾಠಿ, ಗುಂಡು, ಪಿಸ್ತೂಲು ಹಿಡಿಯುವುದಿಲ್ಲ. ಬದಲಿಗೆ ಎದೆಕೊಟ್ಟು ನಿಂತು ಹೋರಾಟ ನಡೆಸುತ್ತೇವೆ. ಇದು ಹೋರಾಟದ ಆರಂಭ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಗೋದ್ರಾ ಹತ್ಯಾಕಾಂಡ ಮತ್ತೊಮ್ಮೆ ನಡೆಯಲಿದೆ ಎಂದು ಹೇಳುತ್ತಾ ಹಿಂದೂಗಳನ್ನು ಹೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗೆ ಮಾತನಾಡಲು ಅವರಿಗೆ ನಾಚಿಕೆ ಆಗಬೇಕು. ಹಿಂದೂ ಕಾರ್ಯಕರ್ತರು ಫುಟ್ಬಾಲ್ ಇದ್ದಂತೆ. ನೀವು ಒದ್ದಷ್ಟು ಮತ್ತೆ ನಾವು ಪುಟಿದೇಳುತ್ತೇವೆ ಎಂದು ಬಿಜೆಪಿ ಮುಖಂಡ ಎನ್. ರಾಜಶೇಖರ್ ಹೇಳಿದರು.
ಹರಿಹರ ಶಾಸಕ ಬಿ.ಪಿ. ಹರೀಶ್, ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯ್ಕುಮಾರ್, ಡಾ.ಟಿ.ಜಿ. ರವಿಕುಮಾರ್, ಪಿ.ಸಿ. ಮಹಾಬಲೇಶ್ವರ ಭಟ್, ಲೋಕಿಕೆರೆ ನಾಗರಾಜ್, ಚಂದ್ರಶೇಖರ್ ಪೂಜಾರ್, ಕೆ.ಎಂ. ವೀರೇಶ್, ರಾಜು ವೀರಣ್ಣ, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಸೋಮಶೇಖರ್, ರಾಜೇಶ್ವರಿ ಕಲ್ಲಿಂಗಪ್ಪ, ಎಚ್.ಎಸ್. ಲಿಂಗರಾಜ್, ಎಂ.ಪಿ. ಕೃಷ್ಣಮೂರ್ತಿ ಪವಾರ್, ದೊಡ್ಡೇಶ್ ಹಾಗು ಇತರರು ಇದ್ದರು.