ಮಕ್ಕಳಲ್ಲಿ ಸಂಶೋಧನಾತ್ಮಕ ಗುಣ ಬೆಳೆಸಿ

ಮಕ್ಕಳಲ್ಲಿ ಸಂಶೋಧನಾತ್ಮಕ ಗುಣ ಬೆಳೆಸಿ

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಾರ್ಷಿಕ ಸಂಭ್ರಮದಲ್ಲಿ ಎ.ಹೆಚ್. ಸಾಗರ್

ದಾವಣಗೆರೆ, ಜ.7- ಮಕ್ಕಳಲ್ಲಿ ಸಂಶೋಧನಾತ್ಮಕ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವಂತೆ ರಾಷ್ಟ್ರೀಯ ಕ್ರೀಡಾಪಟು, ಶಿಕ್ಷಣ ತಜ್ಞ ಎ.ಹೆಚ್. ಸಾಗರ್ ಪೋಷಕರು ಹಾಗೂ ಶಿಕ್ಷಕರಿಗೆ ಕರೆ ನೀಡಿದರು.

ಶನಿವಾರ ಸಂಜೆ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 54ನೇ ವಾರ್ಷಿಕ ಸಂಭ್ರಮ-2024ರ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪ್ರಶ್ನೆಗಳಿಗೆ ಪೋಷಕರು ಕೋಪ ಮಾಡಿಕೊಳ್ಳದೆ, ತಾಳ್ಮೆಯಿಂದ ಉತ್ತರಿಸಬೇಕು. ನಿಮ್ಮ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡದೆ, ಅವರ ಮೇಲೆ ನಂಬಿಕೆ ಇಡಬೇಕು. ಹೊಸದನ್ನು ಮಾಡ ಹೊರಟರೆ ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ನೀವು ಮಕ್ಕಳ ಮಾತುಗಳನ್ನು ತಾಳ್ಮೆಯಿಂದ ಕೇಳುವ ಅಭ್ಯಾಸ ಮೈಗೂಡಿಸಿಕೊಳ್ಳದಿದ್ದರೆ ಅವರು, ಹೊರಗಡೆ ತಮ್ಮ ಮಾತು ಕೇಳುವವರನ್ನು ಹುಡುಕಿಕೊಳ್ಳುತ್ತಾರೆ ಎಂಬ ಎಚ್ಚರಿಕೆಯ ಕುರಿತೂ ಪೋಷಕರಿಗೆ ತಿಳಿಸಿದರು.

ಶಿಕ್ಷಕರು, ಪೋಷಕರು ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂದಿದ್ದರೆ, ಖಾಸಗಿ ಕಂಪನಿಗಳು ಅದರ ಲಾಭ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ  ಮೊಬೈಲ್‌ಗಳಲ್ಲಿ ಪಬ್‌ಜೀ ಯಂತಹ ಆಟಗಳು ಶುರುವಾಗಿದ್ದವು ಎಂದು ಉದಾಹರಿಸಿದರು.

ಕೇವಲ ಮೆಡಿಕಲ್, ಇಂಜಿನಿಯರಿಂಗ್ ಓದಬೇಕು ಎನ್ನುವ ಕಾಲ ಬದಲಾಗಿದೆ. ಕೇಳೇ ಇರದ ಸಾಕಷ್ಟು ಉತ್ತಮ ಕೋರ್ಸ್‌ಗಳು ಲಭ್ಯವಿವೆ. ಅವುಗಳ ಬಗ್ಗೆ ತಿಳಿಯಿರಿ. ನಿಮ್ಮ ಜೀವನದಲ್ಲಿ ಸಾಧಿಸಬೇಕಾದದ್ದು ಹೆಚ್ಚಿರುತ್ತದೆ. ಚಿಕ್ಕ ಪುಟ್ಟ ವಿಷಯಗಳಿಗೆ ನೊಂದು ಕೊಂಡು ಆತ್ಮಹತ್ಯೆಯಂತಹ ಕೃತ್ಯಗಳತ್ತ ಹೋಗದಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ದೇಶದ ಆರ್ಥಿಕತೆ ಬಹಳ ಸುಧಾರಿಸಬೇಕಿದೆ. ಅದು ಮಕ್ಕಳಿಂದ ಮಾತ್ರ ಸಾಧ್ಯ. ಆದ್ದರಿಂದ ಮಕ್ಕಳಲ್ಲಿನ ಸಂಶೋಧನಾತ್ಮಕ ಹಾಗೂ ಪ್ರಶ್ನಾತ್ಮಕ ಗುಣಗಳಿಗೆ ಪ್ರೋತ್ಸಾಹಿಸಿ ಎಂದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿ’ಸೌಜ, ಪದವಿ ಪೂರ್ವ ಕಾ ಲೇಜು ಉಪನ್ಯಾಸಕರುಗಳಾದ ನಟರಾಜ್ ವಿ., ಬುಸ್ಕಾ ವೆಂಕಟಕೃಷ್ಣ, ಡಿ.ಎಸ್. ಜಯಂತ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕೆ.ಎಸ್ ರೇಖಾರಾಣಿ ನಿರೂಪಿಸಿದರು.

error: Content is protected !!