ಭಕ್ತಾದಿಗಳ ಬೆನ್ನಮೇಲೆ ಪರಿಶಿಷ್ಟ ಪೂಜಾರಿಯ ಪಾದಸ್ಪರ್ಶದ ನಡಿಗೆ

ಭಕ್ತಾದಿಗಳ ಬೆನ್ನಮೇಲೆ ಪರಿಶಿಷ್ಟ  ಪೂಜಾರಿಯ ಪಾದಸ್ಪರ್ಶದ ನಡಿಗೆ

ಅರಸಿಕೆರೆ ಪ್ರಸಿದ್ಧ ದುರ್ಗಮ್ಮ ದೇವಿ ಜಾತ್ರೋತ್ಸವಕ್ಕೆ ವೈಭವದ ತೆರೆ

ಹರಪನಹಳ್ಳಿ, ಜ.7- ತಾಲ್ಲೂಕಿನ ಅರಸಿಕೆರೆ ಗ್ರಾಮದ ಆರಾಧ್ಯ ದೈವ ಶಕ್ತಿದೇವತೆ ದಂಡಿನ ದುರುಗಮ್ಮದೇವಿ ಜಾತ್ರಾ ಉತ್ಸವ ಸಹಸ್ರಾರು ಭಕ್ತಾದಿಗಳ ಮಧ್ಯೆ ಹಲವು ಧಾರ್ಮಿಕ ಆಚರಣೆಗಳ ಮಧ್ಯೆ ಭಾನುವಾರ ವೈಭವೋಪೇತವಾಗಿ ನಡೆಯುವ ಮೂಲಕ ಜಾತ್ರೋತ್ಸವ ಸಂಪನ್ನಗೊಂಡಿತು.

2024ನೇ ವರ್ಷದ ಮೊದಲನೆ ಜಾತ್ರೆಯಾದ  ದಂಡಿನ ದುರುಗಮ್ಮದೇವಿ ಉತ್ಸವ ಭಾನುವಾರ ಬೆಳಗಿನಜಾವ ಊರಹೊರಗಿನ ಹೊಂಡಕ್ಕೆ ಗಂಗೆ ಪೂಜೆಗೆ ತೆರಳಿದಳು. ಅಲ್ಲಿ ದಂಡಿನ ದುರುಗಮ್ಮದೇವಿ ಪ್ರತೀಕವಾದ ಕೇಲನ್ನು, ಜತೆಗೆ ಉಪವಾಸ ವ್ರತ ಆಚರಿಸಿದ ದುರ್ಗೆಯರಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಗಂಗೆ ಪೂಜೆ ಬಳಿಕ ಪರಿಶಿಷ್ಟರ ಕಾಲೋನಿಯಲ್ಲಿನ ದೇವಸ್ಥಾನಕ್ಕೆ ಪ್ರವೇಶಿಸಲು ಆರಂಭವಾಯಿತು. 

ದಲಿತ ಪೂಜಾರಿ ಪಿ. ಸಂತೋಷ್‌ ಅವರು, ಪೂಜಾ ವಿಧಿ-ವಿಧಾನಗಳೊಂದಿಗೆ ಅಲಂಕರಿಸಿದ ದೇವರ ಕೇಲನ್ನು ಹೊತ್ತು ದೇವಸ್ಥಾನಕ್ಕೆ ಹೊರಡುತ್ತಾರೆ.  ಹೀಗೆ ಹೊಳೆಯಿಂದ ದೇವಸ್ಥಾನಕ್ಕೆ ಸಂಚರಿಸುವ ಎರಡು ಕಿ.ಮೀ. ಅಂತರದ ದಾರಿಯುದ್ದಕ್ಕೂ ಭಕ್ತಾದಿಗಳು ಬೋರಲಾಗಿ ಮಲಗಿದ ಸರ್ವಜನಾಂಗದ ಭಕ್ತಾದಿಗಳ ಬೆನ್ನಮೇಲೆ ದಂಡಿನ ದುರುಗಮ್ಮದೇವಿಯ ದಲಿತ ಪೂಜಾರಿ ಪಾದ ಸ್ಪರ್ಶ ಮಾಡುವ ಮೂಲಕ ದೇವಸ್ಥಾನಕ್ಕೆ ತಲುಪಿದರು.

ದೇವಿಯ ಅನುಗ್ರಹ ಹೊಂದಿದ ಪರಿಶಿಷ್ಟರ ಪೂಜಾರಿಯು ಕೇಲನ್ನು ಹೊತ್ತು, ತಮ್ಮ ಬೆನ್ನ ಮೇಲೆ ಪಾದಸ್ಪರ್ಶ ಮಾಡಿ, ನಡೆದುಹೋದರೆ ತಮಗೆ ಸಂಭವಿಸಬಹುದಾದ ರೋಗ-ರುಜಿನಗಳು ತಾಕುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ. ಜಾತ್ರೆ, ಇತರೆ ಸಂದರ್ಭಗಳಲ್ಲಿ ನನಗೆ, ನನ್ನ ಕುಟುಂಬಕ್ಕೆ ಹಾಗೂ ನನ್ನನ್ನು ಅವಲಂಬಿಸಿರುವ  ಜಾನುವಾರುಗಳು ತೊಂದರೆಗೆ ಸಿಲುಕದಿರಲಿ, ಸಮಸ್ಯೆಗಳು, ಪೀಡೆಗಳು ತೊಲಗಿದರೆ ಮುಂದಿನ ಜಾತ್ರೆಯಲ್ಲಿ ಅಡ್ಡಮಲಗಿ ಹರಕೆ ತೀರಿಸುತ್ತೇನೆ ಎಂದು ಭಕ್ತರು ಹರಕೆ ಹೊತ್ತುಕೊಂಡಿರುತ್ತಾರೆ. ಹೀಗಾಗಿ, ಅವರು ದೇವಿಯ ಕೇಲನ್ನು ಹೊತ್ತು ಆಗಮಿಸುವ ಪೂಜಾರಿಗೆ ಬೋರಲಾಗಿ ಮಲಗಿ ಬೆನ್ನಮೇಲೆ ಪಾದಸ್ಪರ್ಶ ಮಾಡಿಸಿಕೊಳ್ಳುವ ಹರಕೆ ತೀರಿಸಿ, ಪುನೀತರಾದರು.

ಅನ್ಯೋನ್ಯತೆಯ ಮಧುರ ಬಾಂಧವ್ಯ ಬೆಸೆಯುವ ಸಾಂಸ್ಕೃತಿಕ ಉತ್ಸವ ಇದಾಗಿದೆ ಎಂದೇ ಹೇಳಬಹುದು. ದಂಡಿನ ದುರುಗಮ್ಮದೇವಿ ಜಾತ್ರಾ ಉತ್ಸವದ ಕೊನೆಯ ಆಚರಣೆಯಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹ ಸ್ರಾರು ಸಂಖ್ಯೆಯಲ್ಲಿ ಭಕ್ತರು ರಸ್ತೆಯ ಉಭಯ ಮಾರ್ಗ ದುದ್ದಕ್ಕೂ ನೆರೆದಿದ್ದರು. ಸಂಜೆ ಭಕ್ತರು ಕೊಟ್ಟ ದವಸ, ಧಾನ್ಯಗಳನ್ನು ಅಡುಗೆ ಮಾಡಿ ಮೊದಲು ಉಪವಾಸದಿಂದ ದೇವರ ಸೇವೆ ಮಾಡಿದ ದುರ್ಗಿಯರಿಗೆ ಊಟ ಮಾಡಿಸಿ ನಂತರ ಭಕ್ತಾದಿಗಳಿಗೆ ಊಟ ಮಾಡಿಸಲಾಗುತ್ತದೆ. ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್  ಕಲ್ಪಿಸಲಾಗಿತ್ತು. 

ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯ ವೈ. ದೇವೇಂದ್ರಪ್ಪ, ಜಗಳೂರು  ಶಾಸಕ ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ವಾಲ್ಮೀಕಿ ನಾಯಕ ಸಮಾಜದ  ತಾಲ್ಲೂಕು ಅಧ್ಯಕ್ಷ ವೈ.ಡಿ.ಅಣ್ಣಪ್ಪ. ಯುವ ಮುಖಂಡ ಪ್ರಶಾಂತ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!