ಸೈನಿಕರು ಮತ್ತು ರೈತರ ಶ್ರಮವನ್ನು ಅರಿತು ಬಾಳಬೇಕಿದೆ

ಸೈನಿಕರು ಮತ್ತು ರೈತರ ಶ್ರಮವನ್ನು ಅರಿತು ಬಾಳಬೇಕಿದೆ

‘ಅನ್‍ಮೋಲ್ ಉತ್ಸವ 2023’  ಕಾರ್ಯಕ್ರಮದಲ್ಲಿ ಸಿ.ಜಿ.ದಿನೇಶ್ 

ದಾವಣಗೆರೆ, ಜ.5- ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಇವರಿಬ್ಬರೂ ನಮ್ಮ ದೇಶದ ಬೆನ್ನೆಲುಬು. ಅವರನ್ನು ಗೌರವ ಭಾವನೆಯಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ. ಇವರಲ್ಲಿ ಯಾರಾದರೊಬ್ಬರು ತಮ್ಮ ಕರ್ತವ್ಯವನ್ನು ನಿಭಾಯಿಸದೇ ಹೋದರೆ ನಾಶವಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ದೇಶದೊಳಗೆ ಬೆಚ್ಚಗಿರುವ ನಾವು ಇದನ್ನು ಅರಿತು ಬಾಳಬೇಕಿದೆ ಎಂದು ಅನ್‍ಮೋಲ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ. ಜಿ. ದಿನೇಶ್ ತಿಳಿಸಿದರು. 

ಸಮೀಪದ ಶಿರಮಗೊಂಡನಹಳ್ಳಿಯ ಅನ್‍ಮೋಲ್ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ‘ಅನ್‍ಮೋಲ್ ಉತ್ಸವ 2023’ ರ ಕಾರ್ಯಕ್ರಮವನ್ನು ‘ಜೈ ಜವಾನ್, ಜೈ ಕಿಸಾನ್’ ಎಂಬ ಶೀರ್ಷಿಕೆಯಡಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದ ಬಾವುಟ ಹಾರಾಡುತ್ತಿರುವುದು ಗಾಳಿಯಿಂದಲ್ಲ; ನಮ್ಮ ವೀರ ಯೋಧರ ಉಸಿರಿನಿಂದ. ಸೈನಿಕರು ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ,  ಪ್ರಾಣವನ್ನೇ ಒತ್ತೆ ಇಟ್ಟು, ನಮ್ಮ ಗಡಿಯನ್ನು ಸಂರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ.  

ಹಾಗಾಗಿ ಸೈನಿಕರು ಮತ್ತು ನಮ್ಮ ಅನ್ನದಾತ ರೈತರ ತ್ಯಾಗ ಶ್ರಮವನ್ನು ಪದಗಳಲ್ಲಿ ವರ್ಣಿಸಲಾಗದು. ಅವರು ನಿತ್ಯ ಪ್ರಾತಃಸ್ಮರಣೀಯರು. ಅವರಿಗೆ ನಮನ ಸಲ್ಲಿಸಲು ಈ ಕಾರ್ಯಕ್ರಮ ಅರ್ಪಿಸಲಾಗಿದೆ ಎಂದರು.

ಅನ್‍ಮೋಲ್ ವಿದ್ಯಾಸಂಸ್ಥೆಯು  ಪ್ರತಿವರ್ಷ ವಿಭಿನ್ನ ವಿಷಯಾಧಾರಿತ ವಾರ್ಷಿಕೋತ್ಸವ ಆಚರಿಸುತ್ತಾ ಬಂದಿದ್ದು, ಈವರೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ವಿಶೇಷ, ವಚನ ಸಂಭ್ರಮ, ಚಿತ್ರಾಂಜಲಿ, ಮೇರಾ ಭಾರತ್ ಮಹಾನ್, ದಶರೂಪಿ, ಅನುಬಂಧ, ಭಾವೈಕ್ಯತಾ, ನವರಸ, ಪ್ರಕೃತಿ, ಭಾವ ಸಂಗಮ ಹಾಗೂ ಗಂಧದಗುಡಿ ಎಂಬ ಉತ್ಸವಗಳನ್ನು ಆಚರಿಸಿ ಪೋಷಕರ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ದಿನೇಶ್ ತಿಳಿಸಿದರು.

2022-23 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’, ‘ವರ್ಷದ ವಿದ್ಯಾರ್ಥಿ’ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೈತ ಮತ್ತು ಸೈನಿಕರಿಗೆ ಸಂಬಂಧಿಸಿದ ಗೀತ ಗಾಯನ, ನೃತ್ಯಗಳು ಮತ್ತು ಮೈಮ್‍ನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. 

ಸಮಾರಂಭದಲ್ಲಿ ಸಂಸ್ಥೆ ಉಪಾಧ್ಯಕ್ಷ  ರವೀಂದ್ರ ಡಿ.ವಿ, ಖಜಾಂಚಿ  ರಾಜು ಎಸ್ ಎಸ್, ಜಂಟಿ ಕಾರ್ಯದರ್ಶಿ  ಭೈರೇಶ್ ಕೆ ಇ, ಸದಸ್ಯರಾದ   ಉಮೇಶ್ ಬಿ ಓ,   ಶಿವಲಿಂಗಪ್ಪ ಕೆ ಎನ್,  ಕಲ್ಲೇಶ್ ಟಿ. ಪಿ,  ಪ್ರಕಾಶ್ ಬಿ. ಯು, ಹಾಗೂ ಸಂಸ್ಥೆಯ ಸಲಹಾ ಸಮಿತಿ  ಸದಸ್ಯ  ಎಸ್. ಚಿದಾನಂದ್,  ಪ್ರಾಂಶುಪಾಲ ಕೊಟ್ರೇಶ್ ಯು ಮತ್ತು   ಸುಬ್ರಹ್ಮಣಿ ಎಲ್, ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ವರ್ಗದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!