ಸಾವನ್ನಪ್ಪಿದ ಮ್ಯಾನ್ ಹೋಲ್ ಸ್ಕ್ಯಾವೆಂಜರ್ಸ್‍ಗೆ ಪರಿಹಾರಕ್ಕೆ ಆಗ್ರಹ

ದಾವಣಗೆರೆ, ಜ.5- ಒಳಚರಂಡಿ ಗುಂಡಿಯಲ್ಲಿ ಇಳಿಸಿರುವುದರಿಂದ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಪರಶುರಾಮ್ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಪರಶುರಾಮ್ ಅವರನ್ನು ಒಳಚರಂಡಿಯಲ್ಲಿ ಇಳಿಸಿರುವ ಅಭಿಯಂತರರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ಮ್ಯಾನ್ ಹೋಲ್ ಸ್ಕ್ಯಾವೆಂಜರ್ಸ್ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ. 

ಮಹಾನಗರ ಪಾಲಿಕೆಯ 25ನೇ ವಾರ್ಡಿನಲ್ಲಿ ಈ ಘಟನೆ ನಡೆದಿದ್ದು, ಸೂಪರ್‍ವೈಸರ್ ಆಗಿರುವ ಲಕ್ಷ್ಮಣ್ ಇವರು, ಒಳಚರಂಡಿ ಗುಂಡಿಯಲ್ಲಿ ಪರಶುರಾಮ್ ಅವರನ್ನು ಡಿ.31ರಂದು ಇಳಿಸಿದ್ದರು. 

ಇದರಿಂದಾಗಿ ಅಸ್ವಸ್ಥರಾದ ಪರಶುರಾಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಂದು ಸಂಜೆಯೇ ಸಾವನ್ನಪ್ಪಿರುತ್ತಾರೆ. 

ಈ ಬಗ್ಗೆ ಹಲವು ಬಾರಿ ದೂರು ದಾಖಲಿಸಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಘಟನೆಗೆ ಕಾರಣಕರ್ತರಾದವರ ಮೇಲೆ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಸ್ಕ್ಯಾವೆಂಜರ್ಸ್ ಸಂಘದ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ವಾಸುದೇವ ಎಚ್ಚರಿಸಿದ್ದಾರೆ.

ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ಸ್‍ನ ರಾಜ್ಯಾದ್ಯಂತ ನಡೆದ ಘಟನೆಗಳನ್ನು ಬೆಂಗಳೂರಿನ ಉಚ್ಛ ನ್ಯಾಯಾಲಯದ ನ್ಯಾಯಪೀಠವು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಪ್ರಕರಣವನ್ನು ವಿಚಾರಣೆಗೆ ದಾಖಲಿಸಿಕೊಂಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!