ಹರಿಹರ ತಾಲ್ಲೂಕು ಕಸಾಪ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜೆ. ಕಲೀಂ ಭಾಷ
ಹರಿಹರ, ಜ. 2 – ಕುವೆಂಪು ಅವರು ಕನ್ನಡ ನಾಡು ಕಂಡ ಅಪರೂಪದ ಸಾಹಿತಿಗಳಾಗಿದ್ದರು. ಅವರು ವಿಶ್ವಮಾನವ ಸಂದೇಶ ಸಾರಿ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದು ಹಿರಿಯ ಸಾಹಿತಿ ಜೆ. ಕಲೀಂ ಭಾಷ ತಿಳಿಸಿದರು.
ನಗರದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಪ್ರೌಢಶಾಲೆ ಮತ್ತು ಕಸಾಪ ಹರಿಹರ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಮತ್ತು ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ರವರ ಸಾಹಿತ್ಯ ವಿಚಾರ ಧಾರೆಗಳು ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಮಾತಿನಿಂದ ಕನ್ನಡಿಗರ ಭಾಷಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಕುವೆಂಪು ಅವರು ಅಗ್ರಸ್ಥಾನದಲ್ಲಿದ್ದಾರೆ. ಯುಗದ ಕವಿ ಜಗದ ಕವಿ ವಿಶ್ವಮಾನವ ರಸಋಷಿಯಾಗಿ ಕುವೆಂಪು ಅವರು ಸಾಹಿತ್ಯ ಲೋಕದಲ್ಲಿ ಅಜರಾಮರರಾಗಿದ್ದಾರೆ ಎಂದರು.
ಕನ್ನಡ ನಾಡಿನ ನಾಡಗೀತೆ `ಜಯ ಭಾರತ ತನುಜಾತೆ ಜಯಹೇ ಕರ್ನಾಟಕ ಮಾತೆ’ ಈ ಗೀತೆಯು ಭಾರತ ಮಾತೆಯ ಮತ್ತು ಕನ್ನಡ ತಾಯಿಯ ಹಿರಿಮೆ ಮತ್ತು ಗರಿಮೆಗಳನ್ನು ಸಾರುತ್ತಾ ನಮ್ಮಲ್ಲಿ ದೇಶ ಪ್ರೇಮವನ್ನು ಉಕ್ಕಿಸುತ್ತದೆ. ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಕವನವಂತೂ ಮನುಷ್ಯನ ಜೀವನದ ನಿಲುವನ್ನು ಮಾರ್ಮಿಕವಾಗಿ ಸೂಚಿಸುತ್ತದೆ. ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಚೇತನಾ ಶೀಲನಾಗಬೇಕು ಎಂಬ ಪರಿಕಲ್ಪನೆ ಅವರದ್ದಾಗಿತ್ತು. ಕುವೆಂಪು ಅವರ ಜೀವಮಾನದ ಬೃಹತ್ ಸಾಹಿತ್ಯದ ಕೃತಿ ಶ್ರೀ ರಾಮಾಯಣ ದರ್ಶನಂ ಆಧುನಿಕ ಭಾರತೀಯ ಸಾಹಿತ್ಯದ ಕೃತಿಯಾಗಿದೆ. ಇದರಲ್ಲಿ ಕುವೆಂಪು ಅವರ ದಾರ್ಶನಿಕತೆ ತುಂಬಾ ಅಪರೂಪದ್ದಾಗಿದ್ದು, ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಯಸ್ಸು ಈ ಕೃತಿಗೆ ಸಲ್ಲುತ್ತದೆ. ಅವರ ಕನಸಾಗಿದ್ದ ಮಂತ್ರಮಾಂಗಲ್ಯ ಬಹು ಜನರ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರಾದ ರಾಮಕೃಷ್ಣಮೂರ್ತಿ, ಚಿದಾನಂದ ಕಂಚಿಕೇರಿ, ರಿಯಾಜ್ ಅಹ್ಮದ್, ಬಿ. ಮಗ್ದುಂ ಮಾತನಾಡಿದರು. ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಿ.ಬಿ. ರೇವಣನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದತ್ತಿದಾನಿಗಳಾದ ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್, ಶ್ರೀಮತಿ ಶೀಲಾವತಿ ರಾಮಕೃಷ್ಣಮೂರ್ತಿ ಮತ್ತು ಹಾಜಿ ಹಸನ್‍ಸಾಬ್ ನಾಯ್ಕ್ ಇವರ ಸೇವೆಯನ್ನು ಶ್ಲ್ಯಾಘಿಸಲಾಯಿತು.
ಸುಬ್ರಹ್ಮಣ್ಯ ನಾಡಿಗೇರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರಾ ನೆರವೇರಿಸಿದರು. ಕು.ಸಾನಿಯಾ ಸ್ವಾಗತಿಸಿದರು. ದಿವ್ಯ ವಂದಿಸಿದರು.