ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಆಗ್ರಹ

ಭದ್ರಾ ನೀರಾವರಿ ಸಲಹಾ  ಸಮಿತಿ ಸಭೆ ಕರೆಯಲು ಆಗ್ರಹ

ಹದಡಿ ರಸ್ತೆಯಲ್ಲಿ ನಿಟುವಳ್ಳಿ ವೃತ್ತ ಹಾಗೂ ಐಟಿಐ ಕಾಲೇಜು ಬಳಿ ಸಿಗ್ನಲ್ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ಶೀಘ್ರವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸರಿಪಡಿಸಬೇಕು ಎಂದು ಶಾಸಕ  ಹರೀಶ್ ಪತ್ರಿಕಾಗೋಷ್ಠಿಯಲ್ಲಿಂದು ಒತ್ತಾಯಿಸಿದರು.

ದಾವಣಗೆರೆ, ಜ.2- ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರವೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಜಿಲ್ಲೆಯ ಅಚ್ಚು ಕಟ್ಟು ಪ್ರದೇಶಗಳಿಗೆ 72 ದಿನ ನೀರು ಹರಿಸುವ ವೇಳಾಪಟ್ಟಿ ನಿರ್ಣಯಿಸಿ ಪ್ರಕಟಿಸಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳು ತಿಂಗಳಿನಿಂದ ಭದ್ರಾ ಸಲಹಾ ಸಮಿತಿ ಸಭೆ ಕರೆದಿಲ್ಲ. ಸಮಿತಿಗೆ ಶಾಸಕರು ಸದಸ್ಯರಾಗಿರುತ್ತಾರೆ. ಆದ್ದರಿಂದ ಆಯಾ ಭಾಗದ ಶಾಸಕರನ್ನು ಕರೆದು ಆರೋಗ್ಯಕರ ಚರ್ಚೆ ಮಾಡಬಹು ದಿತ್ತು.  ಆದರೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬೇಜವಾಬ್ದಾರಿ ವರ್ತನೆಯಿಂದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿದರು.

ದಾವಣಗೆರೆ ಜಿಲ್ಲೆಯಲ್ಲಿಯೇ ಹೆಚ್ಚು ಅಚ್ಚುಕಟ್ಟು ಪ್ರದೇಶವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ಈ ಭಾಗದ ರೈತರ ಹಿತ ಕಾಪಾಡುವ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಭದ್ರಾ ನಾಲೆಗೆ ನೀರು ಹರಿಸುತ್ತಿರುವುದರಿಂದ ಈ ಭಾಗದ ತೋಟಗಳಲ್ಲಿರುವ ಬೋರ್‌ಗಳಲ್ಲಿ ನೀರು ಬರುತ್ತಿದೆ. ನೀರು ಸ್ಥಗಿತವಾದರೆ ಅಂತರ್ಜಲ ಬತ್ತಿ ಬೋರ್‌ಗಳಲ್ಲೂ ನೀರು ಸಿಗದ ಪರಿಸ್ಥಿತಿ ಉಂಟಾಗಲಿದೆ. ಪ್ರಸ್ತುತ ಭದ್ರಾ ಜಲಾಶಯದಲ್ಲಿ 151 ಅಡಿ ನೀರು ಲಭ್ಯವಿದ್ದು, ಕುಡಿಯಲು ನೀರು ಹರಿಸುವ ಜೊತೆಗೆ ತೋಟಗಳನ್ನೂ ಉಳಿಸಲು ನೀರು ಹರಿಸಬೇಕು ಎಂದರು.

ಭದ್ರಾ ಜಲಾಶಯದಲ್ಲಿ ಸೋರಿಕೆಯಿಂದ ಪೋಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೋರಿಕೆ ನಿಯಂತ್ರಿಸಬೇಕು. ಕಾಲುವೆಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಲವು ಸೇತುವೆಗಳು ಶಿಥಿಲಗೊಂಡಿದ್ದು, ಶೀಘ್ರ ದುರಸ್ತಿಪಡಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ನಿಯಮಾನುಸಾರ ತುಂಗಭದ್ರಾ ನದಿಯಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡಬೇಕು ಎಂದು ಒತ್ತಾಯಿಸಿದರು.

ಬೇಸಿಗೆ ಆರಂಭವಾಗುತ್ತಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರಿಗಾಗಿ ಜಿಲ್ಲೆಗೆ ಹೆಚ್ಚಿನ ಅನುದಾನ ತರಬೇಕು ಎಂದು ಹರೀಶ್  ಇದೇ ವೇಳೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಬಿ.ಎಂ. ಸತೀಶ್ ಕೊಳೇನಹಳ್ಳಿ, ಶಾಮನೂರು ಲಿಂಗರಾಜು, ಆರನೇಕಲ್ ವಿಜಯಕುಮಾರ್, ಚಿಕ್ಕಬೂದಿಹಾಳ್ ಭಗತ್ ಸಿಂಹ ಉಪಸ್ಥಿತರಿದ್ದರು.

error: Content is protected !!