ಅಮೆರಿಕದ ಅದಿತಿಯ ಅದ್ವಿತೀಯ ನೃತ್ಯ ಪ್ರಸ್ತುತಿಯಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಎಂ
ದಾವಣಗೆರೆ, ಜ.2- ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತಗಳು ಮನೆರಂಜನೆ ಗಾಗಿ ಅಲ್ಲ. ಆತ್ಮ ನಿವೇದನೆಗೆ ಹಾಗೂ ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನ ಎಂಬ ಭಾವನೆ ಇರುವುದರಿಂದಲೇ ವಿಶ್ವದಾದ್ಯಂತ ಇದಕ್ಕೆ ಗೌರವ ಹಾಗೂ ಪೂಜ್ಯ ಭಾವನೆ ಉಂಟು ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್, ಕಲಾಪ್ರಕಾಶ ವೃಂದ ಸಮುದಾಯ ಭವನದಲ್ಲಿ ಇಂದು ಏರ್ಪಾಡಾಗಿದ್ದ ಭಾರತೀಯ ಮೂಲದ ಅಮೆರಿಕ ನಿವಾಸಿ ಕುಮಾರಿ ಆದಿತಿ ಆಚಾರ್ಯ ಅವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಋಗ್ವೇದದಿಂದ ಸ್ವರವನ್ನು ಯಜುರ್ವೇ ದದಿಂದ ಶಬ್ದವನ್ನು ಸಾಮವೇದದಿಂದ ಸಂಗೀ ತವನ್ನು ಅಥರ್ವವೇದದಿಂದ ರಸಗಳನ್ನು ತೆಗೆದುಕೊಂಡು ಬ್ರಹ್ಮ ಭರತನಾಟ್ಯವನ್ನು ಪಂಚಮವೇದವಾಗಿ ಸೃಷ್ಟಿಸಿ ಭರತಮುನಿಗೆ ಕೊಟ್ಟನೆಂದೂ, ಭರತಮುನಿಯಿಂದಾಗಿ ಭೂಮಿಗೆ ಇದು ಬಂದಿದೆ ಎಂದು ಹೇಳಲಾಗುತ್ತಿದ್ದು, ಇಂತಹ ಪವಿತ್ರವಾದ ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯು ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನ ಎಂದರು.
ಭಾರತೀಯ ಸಂಜಾತೆಯಾಗಿ ಪ್ರಸ್ತುತ ಅಮೆರಿಕ ನಿವಾಸಿಯಾಗಿರುವ ಕಲಾವಿದೆ, ವಿದುಷಿ ಆಶಾ ಶ್ರೀನಿವಾಸ ಆಚಾರ್ಯ ಅವರ ಸುಪುತ್ರಿ ಅದಿತಿ ತಾಯಿಯಿಂದಲೂ ಹಾಗೂ ಅನೇಕ ಪ್ರಸಿದ್ಧ ಗುರುಗಳಿಂದಲೂ ನೃತ್ಯಾಭ್ಯಾಸ ಮಾಡಿದ್ದಾರೆ. ಅಮೆರಿಕದಲ್ಲೇ ರಂಗ ಪ್ರವೇಶವನ್ನೂ ಸಹ ಮಾಡಿದ್ದು, ಇಂದು ತನ್ನ ತಾಯಿಯ ತವರೂರಾದ ದಾವಣಗೆರೆಯಲ್ಲಿ ಸುಮಾರು ಎರಡೂವರೆ ತಾಸುಗಳಿಗೂ ಹೆಚ್ಚು ಕಾಲ ಅಮೋಘ ನೃತ್ಯ ಪ್ರದರ್ಶನ ನೀಡಿದರು.
`ನಮ್ಮಮ್ಮ ಶಾರದೆ ಉಮಾಮಹೇಶ್ವರಿ’ ಕೃತಿಯಿಂದ ಆರಂಭ ಮಾಡಿ, ನಂತರ ಪ್ರಸಿದ್ಧ ನೃತ್ಯ ಶಿಕ್ಷಕಿಯರಾದ ವಸುಂಧರಾ ದೊರೆಸ್ವಾಮಿ ಅವರ ಸಂಯೋಜನೆಯ `ಮಹಾದೇವ ಶಿವ ಶಂಭೋ’ ನಟರಾಜ ಕೌಸ್ತುಭಂ ನೃತ್ಯ ಪ್ರಸ್ತುತಿಯನ್ನು ಚಿಟ್ಟೆಸ್ವರದಲ್ಲಿ ಅಭಿನಯಿಸುವಾಗ ಗಂಗಾವತರಣದಲ್ಲಿ ಶಿವನ ರೌದ್ರ ಹಾಗೂ ಗಂಗೆಯ ಲಾಸ್ಯ ಅಂತ್ಯದಲ್ಲಿ ಶಿವನ ಶಾಂತ ಸ್ಥಿತಿ ಇವುಗಳನ್ನು ಮನೋಜ್ಞವಾಗಿ ಅಭಿನಯಿಸಿದಳು.
ಮೂರನೆಯ ಪ್ರಸ್ತುತಿಯಾಗಿ ಮುತ್ತಯ್ಯ ಭಾಗವತರ ಶುದ್ಧ ಧನ್ಯಾಸಿ ರಾಗದ `ಹಿಮಗಿರಿ ತನಯೇ ಹೇಮಲತೆ’ ಇದರ ನೃತ್ಯ ಪರಿಸ್ಥಿತಿಯಲ್ಲಿ ದೇವಿಯು ಮಹಿಷಾಸುರ ಸಂಹಾರ ಮಾಡುವ ಸನ್ನಿವೇಶವನ್ನು ಬೀಭತ್ಸ ವೀರ ರಸಗಳಲ್ಲಿ ಬಿಂಬಿಸಿದಳು. ನಂತರದ ಪ್ರಸ್ತುತಿಯಾಗಿ ಸಾಹಿತ್ಯವಿಲ್ಲದ ಕೇವಲ ಚಾರಿಗಳಲ್ಲಿ ಮಿಶ್ರಗತಿಯ `ತನಿ ಆವರ್ತ’ವು ಸುಮಾರು 20 ನಿಮಿಷಗಳ ಕಾಲ ಶಿವ ಪಾರ್ವತಿಯರ ನೃತ್ಯದ ರೂಪದಲ್ಲಿ ಅತ್ಯಂತ ಚುರುಕಿನ ಚಲನೆಗಳಲ್ಲಿ ಕಣ್ಮನ ರಂಜಿಸಿದ್ದಲ್ಲದೇ ಅದಿತಿ ಸಾಧನೆಯನ್ನು ಸಾಕ್ಷೀಕರಿಸಿತು.
ಪುರಂದರ ದಾಸರ `ನಾನೇನ ಮಾಡಿದೆನೋ ರಂಗ’ ಎನ್ನುವ ಕೀರ್ತನೆಯ ನೃತ್ಯ ಪ್ರಸ್ತುತಿಯಲ್ಲಿ ಹಿರಣ್ಯ ಕಶ್ಯಪುವಿನ ವಧೆ, ಗಜೇಂದ್ರ ಮೋಕ್ಷ ಹಾಗೂ ದ್ರೌಪದಿಯ ಅಕ್ಷಯಾಂಬರ ಸನ್ನಿವೇಶಗಳ ನೃತ್ಯದಲ್ಲಿ ವೀರ ರೌದ್ರ ಬೀಭತ್ಸ ಕರುಣಾ ಹಾಗೂ ಶಾಂತ ರಸಗಳು ಅನುಪಮವಾಗಿ ಮೂಡಿಬಂದವು. ಇದು ನಾರಾಯಣನ ದಶಾವತಾರದ ಅಂಗೀಕ ಅಭಿನಯ ದೊಂದಿಗೆ ಮುಂದುವರೆದು ಪವಮಾನ ಸ್ತುತಿಯೊಂದಿಗೆ ಮುಕ್ತಾಯವಾಯಿತು.
ವಿದುಷಿ ಆಶಾ ಶ್ರೀನಿವಾಸ ಆಚಾರ್ಯರ ಪುತ್ರ ಅಭಿರಾಮ `ಕುಂದ ಗಣಪತಿ ನಮೋ’ ನೃತ್ಯವನ್ನು ಕಲಾಕ್ಷೇತ್ರ ಶೈಲಿಯಲ್ಲೂ, ಪುರಂದರ ದಾಸರ ಕೀರ್ತನೆ `ಗುಮ್ಮನ ಕರೆಯದಿರೆ’ ಹಾಗೂ ಕಮಾಚ್ ರಾಗದಲ್ಲಿ `ಜಯ ಭಾರತ ಮಾತಾ’ ನೃತ್ಯವನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿನು. ತದನಂತರದಲ್ಲಿ ನೆದರ್‌ಲ್ಯಾಂಡ್ ನಿವಾಸಿ ಉಷಾ ಮಧುಕಮಾರ್ ಹಾಗೂ ಅಮೆರಿಕ ನಿವಾಸಿ ಆಶಾ ಶ್ರೀನಿವಾಸ ಆಚಾರ್ಯ ಸಹೋದರಿಯರು `ಆತ್ಮಾ ರಾಮ ಆನಂದರಾಮ’, `ಭೋ ಶಂಭೋ ಶಿವ ಶಂಭೋ ಸ್ವಯಂಭೋ’ ಹಾಗೂ `ಭಾಗ್ಯದ ಲಕ್ಷ್ಮಿ ಬಾರಮ್ಮ’ ಕೃತಿಗಳನ್ನು ಸಂಯೋಜಿಸಿದ ನೃತ್ಯವನ್ನು ಲೀಲಾಜಾಲವಾಗಿ ಅಷ್ಟೇ ಮನೋಜ್ಞವಾಗಿ ಪ್ರಸ್ತುತಪಡಿಸಿದರು.
ದೀಪಾ ರಾಮಕುಮಾರ್ ಅಡಿಗ ಸ್ಕಂದ ಸಮನ್ಯು ಮತ್ತು ಪುಟಾಣಿ ಇಂಚರ ಶಾರ್ವರಿ ಕನ್ನಡ ಗೀತೆಗಳ ನೃತ್ಯ ಮಾಡಿದರು. ಶ್ರೀಮತಿ ಶ್ರೀಮತಿ ಚಂದ್ರಶೇಖರ ಅಡಿಗರು ಧನ್ಯವಾದ ಸಮರ್ಪಿಸಿದರು.
ಜಿಲ್ಲಾ ಬ್ರಾಹ್ಮಣ ಸಮಾಜದ ಡಾ. ಬಿ.ಟಿ.ಅಚ್ಯುತ್, ಸಾಲಿಗ್ರಾಮ ಗಣೇಶ್ ಶಣೈ ಮುಂತಾದವರು ಶುಭ ಹಾರೈಸಿದರು.