ಜಗಳೂರು, ಡಿ.28- ಜಿಲ್ಲೆಯ ನೂತನ ಪೊಲೀಸ್ ಉಪ ಅಧೀಕ್ಷಕರಾಗಿ ಬಿ.ಮಂಜುನಾಥ್ ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರಥಮವಾಗಿ ತಾಲ್ಲೂಕಿನ ಬಿಳಿಚೋಡು ಮತ್ತು ಜಗಳೂರು ಪೊಲೀಸ್ ಠಾಣೆಗಳಿಗೆ ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ನಾನು ಈ ಹಿಂದೆ ಮೈಸೂರು ಟ್ರೈನಿಂಗ್ ಸೆಂಟರ್ ಸೇರಿದಂತೆ ಗುಲ್ಬರ್ಗ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಎಸಿಬಿ ಲೋಕಾಯುಕ್ತರಾಗಿ ಕೆಲಸ ನಿರ್ವಹಿಸಿದ್ದೇನೆ ಎಂದರು.
ನಾನು ಕೂಡ 2008ರಲ್ಲಿ ಜಗಳೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿ 7 ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದ್ದೇನೆ. ನನಗೆ ಈ ತಾಲ್ಲೂಕಿನ ಕಷ್ಟ – ಸುಖಗಳು ಗೊತ್ತು. ಜಗಳೂರಿನ ಯಾವ ಋಣಾನುಬಂಧವೋ ನನಗೆ ಗೊತ್ತಿಲ್ಲ, ಮರಳಿ ನಾನು ದಾವಣಗೆರೆ ಜಿಲ್ಲೆಗೆ ಪೋಲಿಸ್ ಉಪ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಜಗಳೂರು ತಾಲ್ಲೂಕಿಗೆ ಭೇಟಿ ನೀಡಿರುವುದು ನನಗೆ ತುಂಬಾ ಸಂತೋಷದ ವಿಷಯ ಎಂದರು.
ಪಟ್ಟಣಕ್ಕೆ ಎರಡು ಸಿಗ್ನಲ್‌ಗಳ ಅವಶ್ಯಕತೆ : ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಖ್ಯೆಗಳು ಹೆಚ್ಚಾಗುತ್ತಿದ್ದು, ಡಾ. ಬಿ.ಆರ್.ಅಂಬೇಡ್ಕರ್ ವೃತ್ತ ಮತ್ತು ಹಳೇ ಮಹಾತ್ಮ ಗಾಂಧೀಜಿ ವೃತ್ತದ ಎರಡು ಕಡೆ ಸಿಗ್ನಲ್‌ಗಳ ಅವಶ್ಯಕತೆ ಇದೆ. ಹಾಗಾಗಿ ತಾವುಗಳು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಜಿ.ಮಂಜುನಾಥ್ ಉತ್ತರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರಾವ್, ಪಿಎಸ್ಐ ಮಂಜುನಾಥ ಸ್ವಾಮಿ, ಸಾಗರ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಜಗಳೂರಿಗೆ ನೂತನ ಎಎಸ್ಪಿ ಬಿ.ಮಂಜುನಾಥ್ ಭೇಟಿ
