ದಾವಣಗೆರೆ, ಡಿ. 28- ಭಾರತ ಕಮ್ಯುನಿಸ್ಟ್ ಪಕ್ಷವನ್ನು ವಿಸ್ತರಿಸಲು ಎಲ್ಲಾ ಕಾರ್ಯಕರ್ತರು ಜನರ ಬಳಿ ತೆರಳಿ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಎಲ್ಲಾ ಕಾರ್ಯಕರ್ತರು ಪಕ್ಷವನ್ನು ವಿಸ್ತರಿಸೋಣ ಎಂದು ಸಿಪಿಐ ಜಿಲ್ಲಾ ಕಾರ್ಯ ದರ್ಶಿ ಆವರಗೆರೆ ಚಂದ್ರು ಕರೆ ನೀಡಿದರು.
ಇಲ್ಲಿನ ಕಾಂ. ಪಂಪಾಪತಿ ಭವನದಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ 98ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ರೈತರು, ದುಡಿಯುವ ಹಾಗೂ ಶೋಷಿತ ಜನರ ಪರವಾಗಿ ದುಡಿದು ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಗಿ ಇಂದಿಗೆ 98 ವರ್ಷಗಳಾಗಿವೆ ಎಂದರು.
ಪಕ್ಷದ ಹಿರಿಯ ಮುಖಂಡ ಹಾಗೂ ಪಂಪಾಪತಿ, ಶೇಖರಪ್ಪ, ಸುರೇಶ್ ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಕಾಂಗ್ರೆಸ್ನ ಟಿ. ಎಸ್. ನಾಗರಾಜ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್ ಮಾತನಾಡಿ, ಪಕ್ಷ ಸಂಸ್ಥಾಪನೆಯಾಗಿ ಕಾರ್ಮಿಕರ ಮಧ್ಯೆ ಕೆಲಸ ಮಾಡಿರುವುದಲ್ಲದೆ, ಆರಂಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ರೈತರ ಮಧ್ಯೆ ಕೆಲಸ ನಿರ್ವಹಿಸುವುದರೊಂದಿಗೆ ರೈತರ ಪರವಾಗಿಯೂ ಕಮ್ಯುನಿಸ್ಟ್ ಪಕ್ಷ ಕೆಲಸ ನಿರ್ವಹಿಸಿದೆ ಎಂದರು.
ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಸಹಕಾರ್ಯದರ್ಶಿಗಳಾದ ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಮುಖಂಡರುಗಳಾದ ಎಂ.ಬಿ. ಶಾರದಮ್ಮ, ಟಿ.ಹೆಚ್. ನಾಗರಾಜ್, ಪಿ. ಷಣ್ಮುಖ ಸ್ವಾಮಿ, ವಿ ಲಕ್ಷ್ಮಣ, ಐರಣಿ ಚಂದ್ರು ಮಾತನಾಡಿದರು.
ಬಾನಪ್ಪ, ತಿಪ್ಪೇಶ್, ನರೇಗಾ ರಂಗನಾಥ್ ಮತ್ತಿತರರು ಜಾಗೃತಿ ಗೀತೆಗಳನ್ನು ಹಾಡಿದರು. ಎಸ್.ಎಸ್. ಮಲ್ಲಮ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ನಿಟುವಳ್ಳಿ ಬಸವರಾಜ್ ವಂದನಾರ್ಪಣೆ ಮಾಡಿದರು.
ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಜನರ ಮಧ್ಯೆ ತೆರಳಿ ಪಕ್ಷವನ್ನು ವಿಸ್ತರಿಸೋಣ
