ದಾವಣಗೆರೆ, ಡಿ. 28 -ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೈಗೆ ಹಗ್ಗ ಕಟ್ಟಿಕೊಂಡು, ಕಿವಿಯ ಮೇಲೆ ಹೂವು ಇಟ್ಟುಕೊಂಡು ವಿನೂತನ ರೀತಿಯಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಬಳಿ ನಡೆಯುತ್ತಿರುವ 35ನೇ ದಿನದ ಹೋರಾಟದಲ್ಲಿ ಪಾಲ್ಗೊಂಡ ಉಪನ್ಯಾಸಕರು ಕೈಗೆ ಹಗ್ಗ ಕಟ್ಟಿಕೊಳ್ಳುವ ಮೂಲಕ, ಸರ್ಕಾರ ನಮ್ಮ ಭವಿಷ್ಯವನ್ನು ಅತಂತ್ರ ಸ್ಥಿತಿಯಲ್ಲಿ ಬಿಟ್ಟು ಕೈಕಟ್ಟಿ ಹಾಕಿದೆ ಎಂದು ಸಾಂಕೇತಿಕವಾಗಿ ತಿಳಿಸುವ ಪ್ರಯತ್ನ ಮಾಡಿದರು.
ಸರ್ಕಾರ ಹಸಿ ಸುಳ್ಳು ಹೇಳುತ್ತಾ ಕಿವಿಗೆ ಹೂವು ಇಟ್ಟಿದೆ. ಈಗಲಾದರೂ ನಮ್ಮ ಕೈಗೆ ಹಾಕಿರುವ ಕಗ್ಗಂಟನ್ನು ಬಿಡಿಸಿ ನಮ್ಮ ಭವಿಷ್ಯ ರೂಪಿಸಬೇಕು ಎಂದು ಒತ್ತಾಯಿಸಿದರು.
ಮಾನವ ಬಂಧುತ್ವ ವೇದಿಕೆಯ ಪ್ರೊ. ಎ.ಬಿ. ರಾಮಚಂದ್ರಪ್ಪ ಅವರು ಬೆಂಬಲ ಸೂಚಿಸಿ ಮಾತನಾಡಿ, ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಹಿಂದೆ ಅನೇಕರನ್ನು ಕಾಯಂಗೊಳಿಸಿದ ಉದಾಹರಣೆಗಳಿವೆ. 15–20 ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಜೀತದಂತೆ ದುಡಿಸಿ ಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಮಾನವೀಯತೆ ಇರುವ ಸರ್ಕಾರ ನಡೆಸಿಕೊಳ್ಳುವ ರೀತಿ ಇದಲ್ಲ. ಗುಣಾತ್ಮಕ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕಾದರೆ ಶಿಕ್ಷಕರ ಬದುಕನ್ನು ಹಸನುಗೊಳಿಸಬೇಕು ಎಂದು ಹೇಳಿದರು.
ಚುನಾವಣೆಗೆ ಶಿಕ್ಷಕರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಸರ್ಕಾರ ಅಧಿಕಾರಕ್ಕೆ ಬರಲು ಶಿಕ್ಷಕರೂ ಶ್ರಮಿಸಿದ್ದಾರೆ. ಕೂಡಲೇ ಖಾಯಂಗೊಳಿಸಬೇಕು ಎಂದು ಅಖಿಲ ಭಾರತೀಯ ಯುವ ಫೆಡರೇಷನ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಶ್ಯಾಮ್ ಪ್ರಸಾದ್, ಸಿದ್ದೇಶ್, ಕಳಕಪ್ಪ ಚೌರಿ, ಮೋಹನ್, ಜಗದೀಶ್, ಹನುಮಂತಪ್ಪ, ಪ್ರವೀಣ್ ಕುಮಾರ್, ಶುಭಾ, ರೇಖಾ, ಲಕ್ಷ್ಮಿ, ಚಂದ್ರಿಕಾ, ಪ್ರತಿಭಾ, ವೀಣಾ, ಹಸೀನಾ ಬೇಗಮ್ ಇದ್ದರು.
ಜಿಲ್ಲೆಯ ಅತಿಥಿ ಉಪನ್ಯಾಸಕರಿಂದ ವಿನೂತನ ಪ್ರತಿಭಟನೆ
