ಮಕ್ಕಳು ವಿವೇಕಾನಂದರ ಗುಣಗಳನ್ನು ಅಳವಡಿಸಿಕೊಳ್ಳಿ

ಮಕ್ಕಳು ವಿವೇಕಾನಂದರ ಗುಣಗಳನ್ನು ಅಳವಡಿಸಿಕೊಳ್ಳಿ

ದಾವಣಗೆರೆ ತಾಲ್ಲೂಕು ಕಸಾಪ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಶಿವಯ್ಯ ಕರೆ

ದಾವಣಗೆರೆ, ಡಿ 25- ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸ್ವಾವಲಂಬನೆಯ ಜೀವನ, ತ್ಯಾಗ ಮನೋಭಾವ, ಸರಳ ಜೀವನ, ಉದಾತ್ತ ಚಿಂತನೆ, ಎಲ್ಲಾ ಧರ್ಮಗಳನ್ನು ಗೌರವಿಸುವ ಮನೋಭಾವ, ಹೃದಯ ವೈಶಾಲ್ಯತೆ,  ಗುರು-ಹಿರಿಯರಲ್ಲಿ ಭಕ್ತಿ ತೋರಿಸುವುದು, ನಿಸ್ವಾರ್ಥ ಮನೋಭಾವ ಹೊಂದುವುದು ಹಾಗೂ ಇಂದ್ರಿಯಗಳನ್ನು ನಿಗ್ರಹಿಸುವುದನ್ನು ಮಕ್ಕಳು ಕಲಿಯಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಶಿವಯ್ಯ ತಿಳಿಸಿದರು.

ತಾಲ್ಲೂಕು ಕಸಾಪ, ಮಾಜಿ ಪುರಸಭಾ ಪ್ರೌಢಶಾಲೆ, ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಈಚೆಗೆ ನಡೆದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ, ನಿಮ್ಮನ್ನು ನಿಂದಿಸುವ ಜನರನ್ನು ಆಶೀರ್ವದಿಸಿ, ನಮ್ಮ ದುಃಖಗಳಿಗೆ ನಾವೇ ಜವಾಬ್ದಾರರು ಮತ್ತಾರೂ ಅಲ್ಲ, ಯಾವಾಗಲೂ ಒಳ್ಳೆಯದನ್ನೇ ಮಾಡಿ, ಮೊದಲು ಆಳಾಗುವುದನ್ನು ಕಲಿಯಿರಿ ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ, ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ ಎಂಬ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತುಂಬಾ ಅರ್ಥಗರ್ಭಿತವಾಗಿ ಮಕ್ಕಳಿಗೆ ತಿಳಿ ಹೇಳಿದರು. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ವಾಣಿಯನ್ನು ಉಲ್ಲೇಖಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಶಾಲಾ ಮುಖ್ಯ ಶಿಕ್ಷಕ ಆರ್. ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ,  ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ಹಿರಿಯ ನಾಗರಿಕರ ಸಂಯೋಜಕ ನವೀನಕುಮಾರ್, ತಾಲ್ಲೂಕು ಕ. ಸಾ. ಪ ಗೌರವ ಕಾರ್ಯ ದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ ಉಪಸ್ಥಿತರಿದ್ದರು.

 ಶ್ರೀಮತಿ  ಗಿರಿಜಾಬಾಯಿ ಸ್ವಾಗತಿಸಿದರು. ಶ್ರೀಮತಿ ಕೆ.ಸಿ. ವಿದ್ಯಾಬಾಯಿ ವಂದಿಸಿದರು. ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!