ಜಗಳೂರು ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಡಿ. 25 – ಆಧುನಿಕ ಸಮಾಜದಲ್ಲಿ ಸಾಮರಸ್ಯಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರೇರಣಾ ಟ್ರಸ್ಟ್ ತಾಲ್ಲೂಕಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಪ್ರತಿವರ್ಷ ಕ್ರಿಸ್ಮಸ್ ಹಬ್ಬದಂದು ಸರ್ವಧರ್ಮ ಸಮ್ಮೇಳನ ಆಯೋಜಿಸಿ ಸಾಮರಸ್ಯ ಕಾಪಾಡುತ್ತಿರುವುದು ಶ್ಲ್ಯಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಪ್ರೇರಣಾ ಸಮಾಜ ಸೇವಾ ಟ್ರಸ್ಟ್ (ರಿ) ವತಿಯಿಂದ ಕ್ರಿಸ್ತ ಜಯಂತಿ-2023ರ ಅಂಗವಾಗಿ ಹಮ್ಮಿ ಕೊಂಡಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಧೇಯತೆ, ಕರುಣೆಯ ಮೂಲಕ ವಿಶ್ವಕ್ಕೆ ಮಾನವ ಧರ್ಮ ಸಾರಿದ ಯೇಸು ಕ್ರಿಸ್ತರ ಸಂದೇಶ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಲ್ಲಾ ಧರ್ಮದವರ ರಕ್ತದ ಬಣ್ಣ ಒಂದೇ ಆಗಿದ್ದು, ಟಿ.ವಿ., ಮೊಬೈಲ್, ದುಶ್ಚಟಗಳ ದಾಸರಾಗದೆ, ಪ್ರತಿಯೊಬ್ಬರೂ ಆಯಾ ಧರ್ಮಗಳ ದೇವರುಗಳ ದಾಸರಾಗಿ ಉಪಾಸನೆ ನಡೆಸಿದರೆ ಮಾತ್ರ ಅರಿಷಡ್ವರ್ಗಗಳಿಗೆ ಹುಟ್ಟು-ಸಾವಿಗೆ ಮುಕ್ತಿ ಲಭಿಸುವುದು ಎಂದು ಅಧ್ಯಾತ್ಮಿಕತೆಯ ಸಾರವನ್ನು ವಚನಗಳೊಂದಿಗೆ ಉದಾಹರಿಸಿದರು.
ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮತಾಂಧರಿಂದ ದೈಹಿಕ, ಮಾನಸಿಕ, ಹಿಂಸೆಗಳನ್ನು ಸಹಿಸಿಕೊಂಡು ಜಗಜ್ಯೋತಿಯಾಗಿರುವ ಯೇಸು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದರು ಎಂದರು.
ಪ್ರತಿಯೊಂದು ಧರ್ಮ ಜಾತ್ಯತೀತ, ಧರ್ಮಾತೀತವಾಗಿದ್ದು. ಧಾರ್ಮಿಕ ನೆಲೆಗಟ್ಟಿನ ಮೇಲೆ ಅವುಗಳನ್ನು ಆರಾಧಿಸುವ ಉದಾರತೆ, ವೈಶಾಲ್ಯತೆಯ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಯಿಂದ ಐಕ್ಯತಾ ಭಾವನೆ ಸಾರಬೇಕಿದೆ ಎಂದರು.
ಪ್ರವಾದಿ, ಸಾಧು, ಸಂತರು ಅಜ್ಞಾನದ ಕತ್ತಲನ್ನು ತೊಲಗಿಸಿ ಜ್ಞಾನದ ಬೆಳಕನ್ನು ಸಮಾಜ ದಲ್ಲಿ ಉಳಿಸಿ ಹೋಗಿದ್ದಾರೆ. ಆಚಾರ-ವಿಚಾರದಲ್ಲಿ ಸನ್ಮಾರ್ಗದಿಂದ ನಡೆಯಬೇಕು. ಮನುಷ್ಯ ಅಸೂಯೆ, ಸ್ವಾರ್ಥ ತೊರೆದು ಲೋಕ ಕಲ್ಯಾಣಕ್ಕಾಗಿ ಪರೋಪಕಾರಿಯಾಗಿ ಪುಣ್ಯ ಗಳಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಕುಂದಾಪುರ ಹಳವಳ್ಳಿಯ ಜೀರ್ಫ್ ಇಮಾಂ ಖಿಲ್ ರಿಯಾ ಮಸ್ಜೀದ್ ನ ಮೌಲಾನಾ ಅಬೂಬ್ಕರ್ ಸಿದ್ದಿಕ್ ಪಾಳೀಲಿ ಅಲ್ ಹಿಕಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಭಾರತೀಯರಾದ ನಾವು ವೈವಿಧ್ಯತೆಯಲ್ಲಿ ಏಕತೆ ಉಳಿಸಬೇಕಿದೆ. ಕೆಲವರು ದೇಶದಲ್ಲಿ ರಾಜಕೀಯ ಹಿತಾಸಕ್ತಿಗಾಗಿ ವಿನಾಕಾರಣ ಧರ್ಮಾಂಧತೆ, ಕೋಮು ಗಲಬೆ ಸೃಷ್ಠಿಸುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರೂ ತನ್ನ ದಿನನಿತ್ಯದ ಅಗತ್ಯತೆಗೆ ಇತರೆ ಧರ್ಮ, ಜಾತಿಯವರನ್ನು ಪರಸ್ಪರವಾಗಿ ಅವಲಂಬಿಸಿ ಸೌಹಾರ್ದತೆ, ಭಾವೈಕ್ಯತೆಯಿಂದ ನಡೆಸುತ್ತಿರುವ ನೆಮ್ಮದಿಯ ಜೀವನಕ್ಕೆ ದಕ್ಕೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಭವಿಷ್ಯದಲ್ಲಿ ದೇಶದ ನಿರ್ಮಾತೃಗಳಾಗಿರುವ ಶಾಲಾ ಮಕ್ಕಳಲ್ಲಿ ಮಾನವೀಯ ಮೌಲ್ಯ ಗಳನ್ನು, ಅನ್ಯಧರ್ಮೀಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಶಿಕ್ಷಣ ಸಂಸ್ಥೆಗಳು ಬಿತ್ತಬೇಕಿದೆ. ಅಲ್ಲದೇ ಪೋಷಕರು ಅಂಕ ಗಳಿಕೆ ದೃಷ್ಟಿಯಿಂದ ಮಕ್ಕಳಿಗೆ ಮಾನಸಿಕ, ದೈಹಿಕ ನಿಂದನೆ ಮಾಡದೇ ಆಸಕ್ತಿದಾಯಕ ಕ್ಷೇತ್ರದಲ್ಲಿ ಪ್ರತಿಭೆಯನ್ನು ಪ್ರೊತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಾಕುಮಾರಿ ಅಕ್ಕ ಭಾರತಿ ಮಾತನಾಡಿ, ಜಗತ್ತಿಗೆ ಚಂದ್ರಯಾನ ಪರಿಚಯಿಸಿದ ಕೀರ್ತಿ ಭಾರತದ ಇಸ್ರೋ ಸಂಸ್ಥೆಗೆ ಸಲ್ಲುತ್ತದೆ.ನಾವೆಲ್ಲರೂ ಭಾರತೀಯರಾಗಿದ್ದು, ಭಾವೈಕ್ಯತೆಯಿಂದ ಭಾವ ಬೆಸೆಯಬೇಕಿದೆ.ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಬೇಕು. ಧಾರ್ಮಿಕ ಕೇಂದ್ರಗಳು ದಿವ್ಯಶಕ್ತಿಯ ಕೇಂದ್ರಗಳಿದ್ದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾವಣಗೆರೆ ಡಾನ್ ಬಾಸ್ಕೋದ ಫಾದರ್ ರೆಜಿ ಜೇಕಬ್, ಶಿವಮೊಗ್ಗದ ಅಂತರ್ ಧರ್ಮೀಯ ಸೌಹಾರ್ದ ಆಯೋಗದ ನಿರ್ದೇಶಕ ವಂ.ಫಾದರ್ ನೆಲ್ಸನ್ ಪಿಂಟೊ, ಪ್ರೇರಣಾ ಟ್ರಸ್ಟ್ ನ ಫಾದರ್ ಸಿಲ್ವೆಸ್ಟರ್ ಫಿರೆರಾ, ಡಾ.ಶ್ವೇತಾ, ಜ್ಞಾನತರಂಗಿಣಿ ವಿದ್ಯಾ ಸಂಸ್ಥೆಯ ಪಿ.ಎಸ್.ಅರವಿಂದನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜನಾರ್ದನ್, ಸಿ.ತಿಪ್ಪೇಸ್ವಾಮಿ, ಕರವೇ ಮಹಾಂತೇಶ್, ಇಂದಿರಾ ಗುರುಸ್ವಾಮಿ, ಶಾಹಿನಾ ಬೇಗಂ ಮುಂತಾದವರು ಇದ್ದರು.