ಹರಿಹರ, ಡಿ. 25 – ನಗರದಲ್ಲಿ ಕ್ರಿಸ್ಮಸ್ ಹಬ್ಬದ ನಿಮಿತ್ತ ಹರಿಹರದ ವಿಶ್ವ ವಿಖ್ಯಾತ ಪುಣ್ಯಕ್ಷೇತ್ರ ಹರಿಹರದ ಆರೋಗ್ಯ ಮಾತೆಯ ಬಸಿಲಿಕ ಪುಣ್ಯಕ್ಷೇತ್ರ ಚರ್ಚ್ನಲ್ಲಿ ಸಡಗರದಿಂದ ಕ್ರಿಸ್ಮಸ್ ಆಚರಿಸಲಾಯಿತು. ದೀಪಾಲಂಕಾರ ಗಳಿಂದ ಸಿಂಗರಿಸಿ, ಆವರಣದಲ್ಲಿ ಕ್ರಿಸ್ಮಸ್ ಹಟ್ ಹಾಕಲಾಗಿದ್ದು, ಬೊಂಬೆಗಳು, ಕುರಿಗಳು, ಹಸಿರು ಹುಲ್ಲುಗಾವಲು ಮುಂತಾದವುಗ ಳೊಂದಿಗೆ ಏಸು ಜನಿಸಿದ ಗುಡಿಸಲು, ಜನನದ ದೃಶ್ಯಾವಳಿಗಳನ್ನು ಸ್ಥಾಪಿಸಲಾಗಿತ್ತು.
ಮನೆ, ಮನೆಗಳಲ್ಲಿ ಕ್ರಿಸ್ಮಸ್ ಟ್ರೀ ನೆಟ್ಟು, ಅದನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ನಕ್ಷತ್ರಾಕಾರದ ಗೂಡು ದೀಪವನ್ನೂ ಇಟ್ಟು ಮನೆಗಳನ್ನು ಸಿಂಗರಿಸಿರುವುದು ಕಂಡುಬಂತು.
ಹಬ್ಬದ ಪ್ರಯುಕ್ತ ನಡುರಾತ್ರಿ ಜಾಗರಣೆ ದಿವ್ಯಬಲಿ ಪೂಜೆಯಲ್ಲಿ ಸಾವಿರಾರು ಭಕ್ತರು ಸಂತೋಷ, ಸಂಭ್ರಮದಿಂದ ಪಾಲ್ಗೊಂಡಿದ್ದರು. ಪ್ರಧಾನ ಗುರುಗಳಾದ ಫಾದರ್ ಕೆ.ಎ. ಜಾರ್ಜ್ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ರಿಸ್ಮಸ್ ಹಬ್ಬ ಭಗವಾನ್ ಕ್ರಿಸ್ತನು ಮನುಜನಾಗಿ ಧರೆಗೆ ಮಾನವ ರೂಪ ಧರಿಸಿ ಬಂದ ಸ್ಮರಣೆಯ ದಿನವಾಗಿದೆ. ಇದು ನಮ್ಮೆಲ್ಲರಿಗೆ ಪ್ರೇರಣೆಯಾಗಲಿ.
ನಮ್ಮಲ್ಲಿರುವ ಅಹಂ ತೊಲಗಲಿ, ಜೊತೆಗೆ ಎಲ್ಲರಲ್ಲೂ ಪ್ರೀತಿ ಮನೆ ಮಾಡಲಿ ಎಂದು ಹೇಳಿದರು.