ಹರಿಹರ, ಡಿ. 25 – ತಾಲ್ಲೂಕಿನ ಭಾನುವಳ್ಳಿ ಹಾಗೂ ಕಡ್ಲೆಗೊಂದಿ ಗ್ರಾಮಗಳಲ್ಲಿರುವ ಸರ್ಕಾರಿ ಜಾಗದಲ್ಲಿ ನಿರ್ವಸತಿಗರಾದ ಮಾದಿಗ ಸಮುದಾಯದವರಿಗೆ ವಸತಿ ಯೋಜನೆ ರೂಪಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಹರಿಹರ ತಾಲ್ಲೂಕು ಘಟಕದಿಂದ ನಾಳೆ ದಿನಾಂಕ 26 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹರಿಹರದ ಗಾಂಧಿ ವೃತ್ತದಲ್ಲಿ ನಡೆಸಲಾಗುವುದೆಂದು ಸಮಿತಿಯ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ತಿಳಿಸಿದ್ದಾರೆ.
ಭಾನುವಳ್ಳಿಯಲ್ಲಿ ಅಂದಾಜು 100 ಮಾದಿಗ ಸಮುದಾಯಕ್ಕೆ ಸೇರಿದ ಕುಟುಂಬಗಳು ಚಿಕ್ಕ, ಪುಟ್ಟ ಗುಡಿಸಲು, ನೆರಿಕೆ ಮನೆಗಳಲ್ಲಿ ಅನಾರೋಗ್ಯಕರ, ಅನಾಗರಿಕ ವಾತಾವರಣದಲ್ಲಿ ಹಲವು ದಶಕಗಳಿಂದ ವಾಸ ಮಾಡುತ್ತಿದ್ದಾರೆ.
ಗ್ರಾಮದ ಸರ್ವೆ ನಂ. 239/22ರಲ್ಲಿ 2.27 ಎಕರೆ ಎ.ಕೆ. ಸರ್ವೀಸ್ ಇನಾಮ್ ಜಮೀನಿನಲ್ಲಿ ಸದರಿ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಆಗ್ರಹಿಸಿ ಭಾನುವಳ್ಳಿ ಗ್ರಾಮದಿಂದ ಹರಿಹರದ ತಾಲ್ಲೂಕು ಕಚೇರಿವರೆಗೆ 12 ಕಿ.ಮೀ. ಎಲ್ಲಾ ನಿವಾಸಿ ಗಳೊಂದಿಗೆ ಪಾದಯಾತ್ರೆ ಮಾಡಿ ಆಡಳಿತಗಾರರ ಗಮನ ಸೆಳೆಯಲಾಗಿತ್ತು. ಆಗ ಈ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಬಗೆಹರಿಸುವುದಾಗಿ ಸಂಬಂಧಿತ ಅಧಿಕಾರಿಗಳು ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ. 2.27 ಎಕರೆ ಎ.ಕೆ. ಸರ್ವೀಸ್ ಇನಾಂ ಜಮೀನನ್ನು ನಿವೇಶನಕ್ಕೆಂದು ಕಾಯ್ದಿರಿಸಲು ಉಪ ವಿಭಾಗಾಧಿಕಾರಿಗಳಿಗೆ ಪ್ರಾಸ್ತಾವನೆ ಸಲ್ಲಿಸಿದ್ದರೂ ಸರ್ವೆ ದಾಖಲೆಗಳಲ್ಲಿನ ಲೋಪದೋಷಗಳಿಂದ ಆ ಕಡತ ವಿಲೇವಾರಿಯಲ್ಲಿ ಪ್ರಗತಿ ಕಾಣುತ್ತಿಲ್ಲ.
ಕಡ್ಲೇಗೊಂದಿ ಗ್ರಾಮದಲ್ಲಿ ಮಾದಿಗ ಸಮುದಾಯದ 100ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ ಮನೆಗಳ ಕೊರತೆಯಿಂದಾಗಿ ಒಂದು ಆಶ್ರಯ ಮನೆಯಲ್ಲಿ ಮೂರು, ನಾಲ್ಕು ಕುಟುಂಬಗಳು ವಾಸಿಸುವ ದುಸ್ಥಿತಿ ಎದುರಾಗಿದೆ. ಹೀಗಾಗಿ ಗ್ರಾಮದಲ್ಲಿ ಲಭ್ಯ ಇರುವ ಸರ್ಕಾರಿ ಜಮೀನಿನಲ್ಲಿ (ಸರ್ವೇ ನಂ.37) ಅರ್ಹ ಬಡ ದಲಿತ ಕುಟುಂಬದವರಿಗೆ ವಸತಿ ಸೌಲಭ್ಯ ಒದಗಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಭಾನುವಳ್ಳಿಯಲ್ಲಿ ಸಭೆ : ಸೋಮವಾರ ಭಾನುವಳ್ಳಿ ಗ್ರಾಮದಲ್ಲಿ ನಿರ್ವಸತಿಗರ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ಕಠಿಣವಾಗಿ ನಡೆಸಲು ನಿಶ್ಚಯಿಸಲಾಯಿತು. ಸಭೆಯಲ್ಲಿ ಪಿ.ಜೆ.ಮಹಾಂತೇಶ್, ಲಕ್ಷ್ಮಣ, ಕೆಂಚಪ್ಪ, ಅಣ್ಣಪ್ಪ, ಚೌಡಮ್ಮ, ಹೊನ್ನಮ್ಮ, ಗಿಡ್ಡ ಹನುಮಮ್ಮ, ಮಲ್ಲಮ್ಮ ದೂಳೆಹೊಳೆ, ಬಸಣ್ಣಿ, ಭಾಗ್ಯಮ್ಮ, ಚೌಡಮ್ಮ , ಸಾವಿತ್ರಮ್ಮ, ಹಳದಪ್ಪ ಹಾಗೂ ಇತರರಿದ್ದರು.