ದಾವಣಗೆರೆ, ಡಿ.25- ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ವಿದ್ಯಾರ್ಥಿ ಸಂಘ ಹಾಗೂ ಉಪಹಾರ ಗೃಹವನ್ನು ಶುಕ್ರವಾರ ಮಹಾನಗರ ಪಾಲಿಕೆ ಉಪ ಮೇಯರ್ ಶ್ರೀಮತಿ ಯಶೋಧ ಯಗ್ಗಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐಟಿಐ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು ಖುಷಿಯ ವಿಚಾರ. ವಿದ್ಯಾರ್ಥಿಗಳು ನಿಷ್ಠೆ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಸ್ವಾವಲಂಬಿ ಜೀವನ ನಡೆಸುವಂತೆ ಕರೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿವೆ. ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು. ನೂತನ ಉಪಹಾರ ಗೃಹದಲ್ಲಿ ಶುದ್ಧ ನೀರು, ಶುಚಿ-ರುಚಿಯಾದ ಆಹಾರ ದೊರೆಯುವಂತಾಗಲಿ ಎಂದು ಆಶಿಸಿದರು.
ಸಂಸ್ಥೆಯ ಪ್ರಾಚಾರ್ಯ ಏಕನಾಥ ಎನ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1957ರಲ್ಲಿ ಆರಂಭವಾದ ಐಟಿಐ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾಗಿದೆ. 15 ವಿಭಾಗಗಳಲ್ಲಿ 700 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗಗಳು ಲಭ್ಯವಿರುವುದಾಗಿ ಹೇಳಿದರು.
ಕಾಲೇಜು ಅಧೀಕ್ಷಕ ಪ್ರಕಾಶ್ ಎಂ. ಮ್ಯಾಗೇರಿ, ತರಬೇತಿ ಅಧಿಕಾರಿ ಎಂ.ಎಸ್. ರಾಜು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಜೆ.ಕೆ. ಜೀವನ್, ಆರ್. ಪುರುಷೋತ್ತಮ್, ಸಿ.ಹೆಚ್. ಪ್ರವೀಣ್, ಎಂ. ಪ್ರಿಯದರ್ಶಿನಿ ಉಪಸ್ಥಿತರಿದ್ದರು.