ಸಮಾಜ ಒಂದಾದರೆ ವ್ಯಕ್ತಿಗತ ಬೆಳವಣಿಗೆ : ಪಂಡಿತಾರಾಧ್ಯ ಶ್ರೀ

ಸಮಾಜ ಒಂದಾದರೆ ವ್ಯಕ್ತಿಗತ ಬೆಳವಣಿಗೆ : ಪಂಡಿತಾರಾಧ್ಯ ಶ್ರೀ

ದಾವಣಗೆರೆ, ಡಿ.24- ಸಮಾಜ ಒಂದಾದರೆ ಮಾತ್ರ ವ್ಯಕ್ತಿಗತ ಹಾಗೂ ಸಾಮೂಹಿಕ ಬೆಳವಣಿಗೆ ಸಾಧ್ಯ ಎಂದು ಸಾಣೇ ಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಮಹಾಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅವೇಶನದ ಸಮಾರೋಪ ಸಮಾರಂಭ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮಲ್ಲಿರುವ ಚೌಕಟ್ಟಿನಿಂದ ಹೊರ ಬಂದು ನಾವು ವಿಶ್ವಮಾನವರಾಗಬೇಕಿದೆ. ಹನ್ನೆರಡನೇ ಶತಮಾನದಲ್ಲಿಯೇ ಧರ್ಮದಲ್ಲಿನ ಕರ್ಮಟ ಹೊಡೆದು ಹಾಕಿ ಸಮ ಸಮಾಜ ನಿರ್ಮಿಸಲು ಪ್ರಯತ್ನಿಸಿದವರು ಬಸವಣ್ಣ. ಅಂತಹ ಗುರುಗಳನ್ನು ಹೊಂದಿಯೂ, ಗುರುಗಳಿಲ್ಲದಂತೆ ವರ್ತಿಸುತ್ತಿದ್ದೇವೆ. ವ್ಯಕ್ತಿಗತವಾಗಿ ಸುಧಾರಣೆಯಾದರೆ ಸಮಾಜವೂ ಸುಧಾರಣೆಯಾಗುತ್ತದೆ ಎಂದು ಹೇಳಿದರು.

ಲಿಂಗಾಯತ ಎಂಬುದು ಜಾತಿಯಲ್ಲ, ಇದೊಂದು ಧರ್ಮ, ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದವರೆಲ್ಲಾ ಸಮಾಜದ ಬಂಧುಗಳಾಗಬೇಕು ಎಂದು ಶ್ರೀಗಳು, ನಾವೆಲ್ಲಾ ಒಂದಾದರೆ ನಮ್ಮದೇ ವಿಶ್ವಧರ್ಮವಾಗುತ್ತಿತ್ತು ಎಂದು ಹೇಳಿದರು.

ಯುವ ಪೀಳಿಗೆಯ  ಆಚಾರ-ವಿಚಾರದ ಶೈಲಿ ಬದಲಾಗಬೇಕು. ಇಷ್ಟಲಿಂಗಧಾರಿಗಳಾಗಬೇಕು. ಆಗ ನೈತಿಕವಾಗಿಯೂ, ಧಾರ್ಮಿಕವಾಗಿಯೂ ಬಲಶಾಲಿಗಳಾಗಿ ಜಗತ್ತಿಗೆ  ನಮ್ಮ ವ್ಯಕ್ತಿತ್ವ ತೋರಿಸಲು ಸಾಧ್ಯವಾಗುತ್ತದೆ ಎಂದರು.

ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಘೋಷಿಸಬೇಕೆಂದು ಮಹಾಸಭಾ ನಿರ್ಣಯಕ್ಕೆ ಸಹ ಮತ ವ್ಯಕ್ತಪಡಿಸಿದ ಶ್ರೀಗಳು, ಆದಷ್ಟು ಶೀಘ್ರ ಸರ್ಕಾರ ಸಚಿವ ಸಂಪುಟದಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೇರೆ ಯೋಜನೆಗಳಿಗೆ ಒಂದಿಷ್ಟು ಕಡಿಮೆ ಹಣ ಮೀಸಲಿಟ್ಟು, ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ನೀಡಿದಲ್ಲಿ ರೈತ ಆರ್ಥಿಕವಾಗಿ ಸದೃಢನಾಗುತ್ತಾನೆ ಎಂದು ಹೇಳಿದರು.

error: Content is protected !!