ದಾವಣಗೆರೆ,ಡಿ.24-ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ದೇಶ ಸೇವೆ ಮತ್ತು ವ್ಯಕ್ತಿತ್ವವನ್ನು ಸಾಮಾಜಿಕ ಸೇವಾ ಕಾರ್ಯಕರ್ತ ಜೆ.ಸೋಮನಾಥ್ ಮೆಲಕು ಹಾಕಿದ್ದಾರೆ.
1982ರಲ್ಲಿ ಮುಂಬೈನಲ್ಲಿ ಏರ್ಪಾಡಾಗಿದ್ದ ಬಿಜೆಪಿ ಸಮಾವೇಶದಲ್ಲಿ ವಾಜಪೇಯಿ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ದಾವಣಗೆರೆಯಿಂದ ತಾವೂ ಸೇರಿದಂತೆ, ಬಿಜೆಪಿಯ ಅನೇಕ ಹಿರಿಯ ಮುಖಂಡರು ಪಾಲ್ಗೊಂಡಿದ್ದನ್ನು ಸೋಮನಾಥ್ ಸ್ಮರಿಸಿದ್ದಾರೆ. ತಮ್ಮೊಂದಿಗಿದ್ದ ಬೆಣ್ಣೆದೋಸೆ ಹೋಟೆಲ್ ರವಿಕುಮಾರ್, ಬಟ್ಟೆ ವ್ಯಾಪಾರಿಯಾಗಿದ್ದ ದಿ. ಮಣಿಲಾಲ್ ಕೌರ ಮತ್ತಿತರರನ್ನು ವಾಜಪೇಯಿ ಅವರು ಮಾತನಾಡಿಸಿದ್ದ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ಚಿತ್ರವನ್ನು ಸೋಮಣ್ಣ ಫೋಟೋ ಆಲ್ಬಂನಲ್ಲಿ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.