ಕೃಷಿ ಮತ್ತು ಕೈಗಾರಿಕಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ
ದಾವಣಗೆರೆ, ಡಿ. 23- ಆಧುನಿಕ ಕೃಷಿ ಪದ್ಧತಿ ಮೈಗೂಡಿಸಿಕೊಂಡು ತಂತ್ರಜ್ಞಾನದ ಜತೆಗೆ ಯಂತ್ರಗಳನ್ನು ಬಳಸಿ ಕೃಷಿ ಮಾಡುವುದರ ಜತೆಗೆ ತಾವು ಬೆಳೆಯುವ ಉತ್ಪನ್ನಕ್ಕೆ ಮೌಲ್ಯವರ್ಧನೆ ಮಾಡಿ, ಮಾರುಕಟ್ಟೆ ಕಂಡುಕೊಂಡಾಗ ಮಾತ್ರ ಕೃಷಿ ಲಾಭದಾಯಕವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಕೃಷಿ ಮತ್ತು ಕೈಗಾರಿಕಾ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಈಗಿನ ಯುವಕರು ನಗರಗಳತ್ತ ವಲಸೆ ಹೋಗುತ್ತಿರುವುದು ವಿಪರ್ಯಾಸ. ಹಿಂದಿನ ಕೃಷಿ ಪದ್ಧತಿಯನ್ನು ಈಗಲೂ ಅನುಸರಿಸಿದರೆ ಯಾವುದೇ ಕಾರಣಕ್ಕೂ ಲಾಭವಾಗುವುದಿಲ್ಲ ಎಂದು ಹೇಳಿದರು.
ವೀರಶೈವ ಲಿಂಗಾಯತರು ಬಹುತೇಕರು ಕೃಷಿಕರಾಗಿದ್ದು, ರೈತರ ಹೊಲಗಳಿಗೆ ನೀರು ಹಾಗೂ ದಿನ ಪೂರ್ತಿ ಗುಣಮಟ್ಟದ ವಿದ್ಯುತ್ ಪೂರೈಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಹಾಸಭಾದ ಅವೇಶನದಲ್ಲಿ ಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಇದೇ ವೇಳೆ ಭಗವಂತ ಖೂಬಾ ಸಲಹೆ ನೀಡಿದರು.
ರೈತರಿಗೆ ನೀರು ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯಾದರೆ ಯಾವುದೇ ಕಾರಣಕ್ಕೂನ ರೈತ ಹಿಂದೆ ಬಿಳಲಾರ ಕಷ್ಟಪಟ್ಟು ಉಳುಮೆ ಮಾಡುತ್ತಾನೆ. ಈ ನಿಟ್ಟಿನಲ್ಲಿ ಈ ಅವೇಶನದಲ್ಲಿ ನಿರ್ಣಯ ಮಾಡಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಕಳೆದ 10 ವರ್ಷಗಳ ಹಿಂದೆ 2.3 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ್ದ ಭಾರತವು ಈಗ 3.5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿ ಜಗತ್ತಿನ 5ನೇ ಸ್ಥಾನದಲ್ಲಿದೆ. 25ರ ವೇಳೆಗೆ ಭಾರತವು ವಿಶ್ವದ ಮೂರನೇ ಬಲಿಷ್ಠ ರಾಷ್ಟ್ರವಾಗಿ ಹಾಗೂ ಮುಂದಿನ 25 ವರ್ಷಗಳಲ್ಲಿ ಪ್ರಪಂಚದ ಪ್ರಥಮ ಅಥವಾ ದ್ವಿತೀಯ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಕೇಂದ್ರ ಸರಕಾರ ಯಾವುದೇ ರಾಜ್ಯದಲ್ಲಿ ನೀರಿನ ಸಮಸ್ಯೆಯನ್ನು ದೇಶದ ಸಮಸ್ಯೆ ಎಂದು ಭಾವಿಸಿ ಆ ಸಮಸ್ಯೆಯನ್ನು ಬಗೆಹರಿಸಿದರೆ, ರಾಜ್ಯಕ್ಕೆ ಹೆಚ್ಚಿನ ನೀರು ಲಭಿಸಿ, ವಿದ್ಯುತ್ ಉತ್ಪಾದಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕೃಷಿ ಉಪಕರಣ ಮೇಲಿನ ಆಮದು ಸುಂಕ ಕಡಿಮೆ ಮಾಡಿ, ರೈತರಿಗೆ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಸತತವಾಗಿ ಬೆಳೆಗಳಿಗೆ ರೋಗ ಬರುತ್ತಿದೆ. ಅವುಗಳಿಗೆ ಪರಿಹಾರ ಕಂಡು ಹಿಡುವ ಕಾರ್ಯವನ್ನು ವಿಶ್ವವಿದ್ಯಾನಿಲಯಗಳು ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯಮಿ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಎಸ್. ನವೀನ್, ಎಸ್.ರುದ್ರೇಗೌಡರು, ನೈಸರ್ಗಿಕ ಕೃಷಿ ತಜ್ಞ ಚಂದ್ರಶೇಖರ ನಾರಾಯಣಪುರ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಕುಲಪತಿ ಡಾ.ಆರ್.ಸಿ ಜಗದೀಶ್, ಪ್ರಗತಿಪರ ರೈತ ಎಚ್.ಏಕಾಂತಯ್ಯ, ಮುಖಂಡರಾದ ಚಿದಾನಂದ ಮಠದ, ಲೋಕಿಕೆರೆ ನಾಗರಾಜ್, ಬಿ. ಚಿದಾನಂದಪ್ಪ, ಐಗೂರು ಚಂದ್ರಶೇಖರ್ ಮತ್ತಿತರರಿದ್ದರು.
ಅ.ಭಾ.ವೀ.ಲಿಂ.ಮ. ನಗರ ಮಹಿಳಾ ವಿಭಾಗದ ಸೌಮ್ಯ ಸತೀಶ್, ಕೆ.ಜಿ. ಶಿವಕುಮಾರ್, ಕು.ಖುಶಿ ಚಂದ್ರಶೇಖರ್ ನಿರೂಪಿಸಿದರು.