ಅತಿಥಿ ಶಿಕ್ಷಕರ ಮುಷ್ಕರದಿಂದಾದ ಸಮಸ್ಯೆ ನೀಗಲು ಆಗ್ರಹ

ಅತಿಥಿ ಶಿಕ್ಷಕರ ಮುಷ್ಕರದಿಂದಾದ ಸಮಸ್ಯೆ ನೀಗಲು ಆಗ್ರಹ

ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಾಯಕೊಂಡ, ಡಿ. 22 ಸರ್ಕಾರ  ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸದೇ ಇರುವುದ ರಿಂದ, ನಮ್ಮ ವ್ಯಾಸಂಗಕ್ಕೆ ತೊಂದರೆಯಾಗಿದ್ದು, ಕೂಡಲೇ ಸೂಕ್ತ ವ್ಯವಸ್ಥೆ ಮಾಡಬೇಕು, ಎಂದು ಒತ್ತಾಯಿಸಿ ಇಲ್ಲಿನ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.

 ಭರತ್, ಏಳುಕೋಟಿ, ಚೇತನ್ ಮಾತನಾಡಿ, ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೇವೆ. ಸುಮಾರು ಮೂರು ನಾಲ್ಕು ತಿಂಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ತರಗತಿ ಬಹಿಷ್ಕರಿಸಿದ್ದಾರೆ. ಅತಿಥಿ,  ಉಪನ್ಯಾಸಕರು  ಬೋಧನೆ ನಿಲ್ಲಿಸಿ ಮುಷ್ಕರದಲ್ಲಿ ತೊಡಗಿರುವುದರಿಂದ, ನಮ್ಮ ಕಾಲೇಜಿನಲ್ಲಿ ಅತಿಥೀ ಉಪನ್ಯಾಸಕರು ಮುಗಿಸಬೇಕಾದ ಸಿಲಬಸ್ ಹಾಗೆಯೇ ಉಳಿದಿವೆ. ಪ್ರಥಮ ಸಮಿಸ್ಟರ್ ಅವಧಿ ಮುಗಿಯುತ್ತಾ ಬಂದರೂ, ಅಧ್ಯಾಯಗಳು ಪೂರ್ತಿಯಾಗಿಲ್ಲ, ನಮ್ಮ ವಿದ್ಯಾಭ್ಯಾಸಕ್ಕೆ ಇದು ತೊಡಕಾಗಿದೆ ಎಂದು ದೂರಿದರು.

ದಾವಣಗೆರೆ ವಿಶ್ವ ವಿದ್ಯಾನಿಲಯ ಮತ್ತು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದರು.

ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳು ಅಕ್ಟೋಬರ್ ನಲ್ಲಿ ಆರಂಭಗೊಂಡರೆ, ದಾವಣಗೆರೆ ವಿಶ್ವ ವಿದ್ಯಾನಿಲಯ ಆಗಸ್ಟ್‌ನಲ್ಲಿಯೇ ಕಾಲೇಜು ಆರಂಭಿಸಿತು. ಆಗ ಉಪನ್ಯಾಸಕರ ನೇಮಕಾತಿ ಆದೇಶ ಬಂದಿರಲಿಲ್ಲ. ಉಪನ್ಯಾಸಕರಾಗಿ ಆಯ್ಕೆಗೊಂಡವರು ಕೆಲ ದಿನಗಳಲ್ಲಿಯೇ ನೇಮಕಾತಿ ಖಾಯಂ ಗೊಳಿಸಲು ಮುಷ್ಕರ, ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ನಾವು ತೀರಾ ತೊಂದರೆಗೀಡಾಗಿದ್ದೇವೆ  ಎಂದು ವಿದ್ಯಾರ್ಥಿಗಳು ವಿವರಿಸಿದರು.

 ಕಾಲೇಜಿನಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಸಾಗಿ ನಾಡ ಕಛೇರಿಗೆ ತೆರಳಿ ಉಪ ತಹಶಿಲ್ದಾರ್ ಹಾಲೇಶಪ್ಪ ಅವರುಗೆ ಮನವಿ ಸಲ್ಲಿಸಿದರು.

ಅಭಿಷೇಕ್, ಸಂಜಯ್, ಸನಾವುಲ್ಲಾ, ಕುಮಾರ್, ಮಾಲತೇಶ್, ಕಾವ್ಯ, ಅಕ್ಷತಾ ಮತ್ತಿತರರು ಇದ್ದರು.

error: Content is protected !!