ಲಾರಿಗಳ ಮೇಲಿನ ಹೆಚ್ಎಸ್ಆರ್ಪಿ, ಟೇಪ್, ಜಿ.ಪಿ.ಎಸ್. ನಿರ್ಬಂಧಗಳಿಗೆ ಆಕ್ಷೇಪ
ದಾವಣಗೆರೆ, ಡಿ. 19 – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾರಿ ವಾಹನ ಮಾಲೀಕರ ಮೇಲೆ ಇಲ್ಲಸಲ್ಲದ ನಿಯಮಗಳನ್ನು ಹೇರಿ ಸಂಕಷ್ಟಕ್ಕೆ ಗುರಿ ಮಾಡು ತ್ತಿವೆ ಎಂದು ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹೆಚ್.ಎಸ್.ಆರ್.ಪಿ. ಕಡ್ಡಾಯಗೊಳಿಸಿದೆ. ಆದರೆ, ಈ ಫಲಕಗಳೇ ಕಳಪೆಯಾಗಿವೆ. ದುಬಾರಿ ದರ ಕೊಟ್ಟು ಕಳಪೆ ಫಲಕ ಪಡೆಯುವಂತಾಗಿದೆ. ಕಳಪೆ ಕಾರ ಣದಿಂದ ಫಲಕಗಳು ಮುರಿದರೆ ಹೊಸದು ಬರುವರೆಗೂ ಲಾರಿ ಸೇವೆ ನಿಲ್ಲಿಸಬೇಕಿದೆ ಎಂದು ಹೇಳಿದರು.
ಕ್ಯೂ.ಆರ್. ಕೋಡ್ ಇರುವ ರಿಫ್ಲೆಕ್ಟಿವ್ ಟೇಪ್ ಬಳಕೆ ಕಡ್ಡಾಯ ಮಾಡಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಕ್ಯೂ.ಆರ್. ಕೋಡ್ ಇರುವ ರಿಫ್ಲೆಕ್ಟರ್ ಅನ್ನು ಮೀಟರ್ಗೆ 130 ರೂ.ಗಳಂತೆ ಖರೀದಿಸಬೇಕಿದೆ. ಆದರೆ, ಮಾರುಕಟ್ಟೆಯಲ್ಲಿ 53 ರೂ.ಗಳಿಗೆ ಇನ್ನೂ ಉತ್ತಮ ರಿಫ್ಲೆಕ್ಟಿವ್ ಟೇಪ್ಗಳು ಸಿಗುತ್ತಿವೆ ಎಂದವರು ತಿಳಿಸಿದರು.
ಅಲ್ಲದೇ, ಹಳೆಯ ವಾಹನಗಳಿಗೆ ಜಿ.ಪಿ.ಎಸ್. ಕಡ್ಡಾಯ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ 2 ಸಾವಿರ ರೂ.ಗಳಿಗೆ ಸಿಗುವ ಉಪಕರಣಗಳನ್ನೇ 10 ಸಾವಿರ ರೂ.ಗಳಿಗೆ ಕಡ್ಡಾಯ ಖರೀದಿ ಮಾಡುವಂತೆ ಹೇಳಲಾಗುತ್ತಿದೆ ಎಂದು ಸೈಫುಲ್ಲಾ ದೂರಿದರು.
ಸರ್ಕಾರದ ಇಂತಹ ಕ್ರಮಗಳಿಂದ ಲಾರಿಗಳು ಹಾಗೂ ಅದರ ಮಾಲೀಕರು – ಚಾಲಕರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ಪ್ರತಿ 100 ಕಿ.ಮೀ.ಗೆ ಒಂದು ಲಾರಿ ತಂಗುದಾಣ ನಿರ್ಮಿಸುವಂತಹ ಕ್ರಮಗಳಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಇಂತಹ ಕ್ರಮಗಳನ್ನು ತೆಗೆದುಕೊಳ್ಳದೇ ಲಾರಿ ಮಾಲೀಕರ ಮೇಲೆ ದುಬಾರಿ ಹೇರಿಕೆ ಕ್ರಮಗಳನ್ನೇ ತೆಗೆದುಕೊಳ್ಳಲಾಗುತ್ತಿದೆ ಎಂದವರು ಆಕ್ಷೇಪಿಸಿದರು. ಸರ್ಕಾರ ಈ ನಿರ್ಧಾರಗಳನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಲಾರಿ ಮಾಲೀಕರು ರಾಜ್ಯ ಮಟ್ಟದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಾರೀ ಮಾಲೀಕರ ಸಂಘದ ಪದಾಧಿಕಾರಿಗಳಾದ ಭೀಮಣ್ಣ, ಎಸ್.ಕೆ. ಮಲ್ಲಿಕಾರ್ಜುನ್, ಮಹಾಂತೇಶ್ ಒಣರೊಟ್ಟಿ ಮತ್ತಿತರರು ಉಪಸ್ಥಿತರಿದ್ದರು.