ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಪಿ.ಡಿ. ಮುರಳಿಧರ್
ದಾವಣಗೆರೆ, ಡಿ. 15 – ಏಡ್ಸ್ ರೋಗಕ್ಕೆ ಯಾವುದೇ ಮದ್ದಿಲ್ಲ. ಅರಿವು ಹಾಗೂ ಪರೀಕ್ಷೆಯಿಂದ ಆರೋಗ್ಯ ಸ್ಥಿತಿ ಖಚಿತ ಪಡಿಸಿಕೊಳ್ಳುವ ಮೂಲಕ ಇದರ ಹರಡುವಿಕೆ ತಡೆಯಬಹುದು ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಪಿ.ಡಿ. ಮುರಳಿಧರ್ ಹೇಳಿದರು.
ನಗರದ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ವಿಶ್ವ ಏಡ್ಸ್ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹೆಚ್.ಐ.ವಿ. ಒಂದು ವೈರಸ್ ಆಗಿದೆ. ಈ ವೈರಸ್ ಸೋಂಕಿಗೆ ಸಿಲುಕಿ ಕಾಯಿಲೆ ಪೂರ್ಣ ಹಂತಕ್ಕೆ ಬಂದಾಗ ಅದನ್ನು ಏಡ್ಸ್ ಎಂದು ಕರೆಯಲಾಗುತ್ತದೆ. ಏಡ್ಸ್ನ ಶೇ.90 ಪ್ರಕರಣಗಳಿಗೆ ಅಸುರಕ್ಷಿತ ಲೈಂಗಿಕತೆಯೇ ಕಾರಣ ಎಂದವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಏಡ್ಸ್ ಪ್ರತಿಬಂಧಕ ಘಟಕದ ಮೇಲ್ವಿಚಾರಕ ಎ.ಪಿ. ಜಗದೀಶ್, 2030ರ ವೇಳೆಗೆ ಭಾರತ ಹೆಚ್.ಐ.ವಿ. ಮುಕ್ತವಾಗಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗುರಿಯಾಗಿದೆ. ಈ ಗುರಿ ಸಾಧಿಸಲು ಸಮುದಾಯಗಳ ಶ್ರಮ ಬಹು ಮುಖ್ಯ. ವಿದ್ಯಾರ್ಥಿ ಸಮುದಾಯ ಏಡ್ಸ್ ಕುರಿತು ಜಾಗೃತಿ ಹೊಂದಬೇಕು ಎಂದು ಹೇಳಿದರು.
ಏಡ್ಸ್ ರೋಗಿಗಳ ಬಗ್ಗೆ ಕಳಂಕ ತೋರುವುದು ಇಲ್ಲವೇ ತಾರತಮ್ಯ ಮಾಡುವುದು ಅಪರಾಧ. ಇಂತಹ ಕೃತ್ಯ ಎಸಗುವವರಿಗೆ 2 ವರ್ಷ ಜೈಲು ಹಾಗೂ 10 ಲಕ್ಷ ರೂ.ಗಳ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಇದೆ ಎಂದವರು ಹೇಳಿದರು.
ಮೋತಿ ವೀರಪ್ಪ ಕಾಲೇಜಿನ ಪ್ರಾಂಶುಪಾಲ ಪಂಚಾಕ್ಷರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯ್ತಿ ಕಾನೂನು ಸಲಹೆಗಾರ ಮನೋಹರ್ ಮಹೇಂದ್ರಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಾಂಡುರಂಗ ಪಟಗೆ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಡಿ.ಹೆಚ್. ಗೀತಾ, ವೈದ್ಯಕೀಯ ಅಧಿಕಾರಿ ಡಾ. ವೆಂಕಟೇಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.