ದಾವಣಗೆರೆ,ಡಿ. 15 – ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂಘ ಹಾಗೂ ಎಐಟಿಯುಸಿ ಇವರ ಸಹಯೋಗದಲ್ಲಿ ಆವರಗೆರೆಯ ಪಿ. ಬಸವನಗೌಡ ಬಡಾವ ಣೆಯ ಸರ್ಕಾರಿ ಪ್ರಾಥಮಿಕ ಶಾಲೆ ಮುಂಭಾಗ ದಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಾಗೂ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿತ್ತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಇವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ರಾಷ್ಟ್ರದ ಅಸಂ ಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯನ್ನು ಒದಗಿಸಲು ಹಲವು ಕಾಯ್ದೆಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕಾರ್ಮಿಕರು ಸಂಘಟಿತರಾಗುವ ಮೂಲಕ ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಭಾರತದಲ್ಲಿ ಶೇ. 90ಕ್ಕೂ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೃಷಿ ಕಾರ್ಮಿಕರು, ಕಟ್ಟಡ ಗುತ್ತಿಗೆದಾರರು, ಗೃಹ ಕೆಲಸ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಈ ವರ್ಗಕ್ಕೆ ಸೇರಿಸಲಾಗಿದೆ ಎಂದರು. ಅಸಂಘಟಿತ ವಲಯಕ್ಕೆ ಯಾವುದೇ ಉದ್ಯೋಗ ಭದ್ರತೆ ಇಲ್ಲ ಮತ್ತು ಆರೋಗ್ಯ ವಿಮೆ ಪಿಂಚಣಿಗಳು, ಅಂಗವೈಕಲ್ಯದಂತಹ ಸಂದರ್ಭದಲ್ಲಿ ತೊಂದರೆಗೊಳಗಾಗುತ್ತಾರೆ. 2008ರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯು ವಿವಿಧ ಸಾಮಾಜಿಕ ಭದ್ರತೆಗಳನ್ನು ಒದಗಿಸಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡುತ್ತಾ, ಕೃಷಿ ಕಾರ್ಮಿಕರು ಇ-ಶ್ರಮ್ ಕಾರ್ಡ್ಗಳನ್ನು ನೋಂದಣಿ ಮಾಡಿಸಿಕೊಳ್ಳುವ ಮೂಲಕ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳ ಬೇಕು, ದೇಶದ ಪ್ರಗತಿಗೆ ಅಸಂಘಟಿತ ಕಾರ್ಮಿಕರ ಶ್ರಮವೂ ಕಾರಣವಾಗಿದ್ದು, ಅವರ ಶ್ರಮಕ್ಕೆ ತಕ್ಕಂತೆ ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆಯು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕಾರ್ಮಿಕ ಸಂಘಟನೆಗಳ ಜೊತೆಗೂಡಿ ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವನ್ನು ಮೂಡಿಸಿ ಅವರನ್ನು ನೋಂದಣಿ ಮಾಡಿಸಿ, ಫಲಾನುಭವಿಗಳಾಗಲು ಶ್ರಮಿಸುತ್ತಿರುವುದು ತುಂಬಾ ಶ್ಲ್ಯಾಘನೀಯ ಕಾರ್ಯವೆಂದು ಪ್ರಶಂಸಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ ಅವರು ಕಾರ್ಮಿಕ ಸಂಘಟನೆಯು ಕಾರ್ಮಿಕ ಇಲಾಖೆಯ ಜೊತೆಗೂಡಿ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡುತ್ತಿದೆ. ಆ ಮೂಲಕ ಸಮ ಸಮಾಜದ ಆಶಯವನ್ನು ಸಾಕಾರಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ವಕೀಲರ ಸಂಘದ ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಮಾಜಿ ಮೇಯರ್ ಜಯಮ್ಮ ಗೋಪಿನಾಥ್, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕಾಂ|| ವಿ. ಲಕ್ಷ್ಮಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಎಸ್.ಆರ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿ.ಬಿ. ಬಸವನಗೌಡ ಬಡಾವಣೆಯ ನಿವಾಸಿಗಳಾದ ಮಂಜುನಾಥ್, ವಕೀಲರಾದ ವಿಜಯಕುಮಾರ್ ಡಿ.ಎಸ್. ಮನೋಜ್ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.