ದಾವಣಗೆರೆ, ಡಿ. 15- ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಇದೇ ದಿನಾಂಕ 18 ರಿಂದ ಜನವರಿ 12 ರವರೆಗೆ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ `ವಿನಯ ನಡಿಗೆ, ಹಳ್ಳಿಯ ಕಡೆಗೆ’ ಬೃಹತ್ ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಲ್ಲಿ ಪಾದಯಾತ್ರೆ ಮತ್ತು ಆಯ್ದ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದರು.
ಜಗಳೂರು ವಿಧಾನಸಭಾ ಕ್ಷೇತ್ರದ ಗಡಿಭಾಗದ `ಚಿಕ್ಕ ಉಜ್ಜಯಿನಿ’ ಗ್ರಾಮದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. 25 ದಿನಗಳ ಬಳಿಕ ದಾವಣಗೆರೆ ತಾಲ್ಲೂಕು ಹದಡಿ ಗ್ರಾಮದಲ್ಲಿ ಮುಕ್ತಾಯಗೊಳ್ಳಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ 20 ರಿಂದ 30 ಹಳ್ಳಿಗಳಲ್ಲಿ ಪಾದಯಾತ್ರೆ ಸಂಚರಿಸಲಿದೆ ಎಂದು ಹೇಳಿದರು. ಜನಪ್ರತಿನಿಧಿಗಳು, ಮುಖಂಡರು, ಯುವಕರು, ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು ಭಾಗವಹಿಸಲಿದ್ದಾರೆ. ಪಾದಯಾತ್ರೆ ಮುಕ್ತಾಯವಾಗುವರೆಗೂ ನಿತ್ಯ ರಾತ್ರಿ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಗ್ರಾಮೀಣ ಮೂಲಭೂತ ಸಮಸ್ಯೆಗಳು ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಮಗ್ರ ಸಮಾಲೋಚನೆ ನಡೆಸಲಾಗುವುದು ಎಂದರು.
ಬರುವ ದಿನಗಳಲ್ಲಿ `ಮಾದರಿ ಸಂಸದ’ ಎಂಬ ವಿಚಾರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸುವ ಯೋಚನೆ ಇದೆ. ದೊಡ್ಡ ಮೊತ್ತದ ನಗದು ಬಹುಮಾನ ನೀಡುವ ಉದ್ದೇಶ ಸಹ ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಕ್ಷೇತ್ರಗಳಲ್ಲಿ ಸಂಚರಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಕ್ಷೇತ್ರ ಸುತ್ತಲು ವರಿಷ್ಠರು ಸೂಚಿಸಿದ್ದು, ಸಮೀಕ್ಷೆಯಲ್ಲಿ ನನ್ನ ಹೆಸರು ಮುಂಚೂಣಿಗೆ ಬಂದರೆ, ಟಿಕೆಟ್ ನೀಡುವುದಾಗಿ ಹೇಳಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಥಮಿಕ ಸಮೀಕ್ಷಾ ವರದಿಯಲ್ಲಿ ಜಿಲ್ಲೆಯಿಂದ ಮೂವರು ಆಕಾಂಕ್ಷಿಗಳ ಹೆಸರುಗಳು ಇದ್ದು, ಅದರಲ್ಲಿ ನನ್ನ ಹೆಸರೂ ಸಹ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ ಮಾರ್ಗ ಟ್ರಸ್ಟ್ನ ಮುಖಂಡರಾದ ಸುರೇಶ್, ಹಾಲೇಕಲ್ ಎಸ್.ಟಿ. ಅರವಿಂದ್, ಬಿ. ನಿಂಗರಾಜ್, ಎಸ್. ಶರತ್ಕುಮಾರ್, ಕಲ್ಲೇಶ್ ಮತ್ತಿತರರಿದ್ದರು.