ಮಲೇಬೆನ್ನೂರು, ಡಿ.12- ಅಮಾವಾಸ್ಯೆ ಅಂಗವಾಗಿ ಮಂಗಳವಾರ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ದೇವಸ್ಥಾನದ ಎಲ್ಲಾ ವಸತಿ ಗೃಹಗಳು ಭರ್ತಿ ಆಗಿದ್ದರಿಂದ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ತಂಗಿದ್ದರು. ಗದ್ದಿಗೆ ಟ್ರಸ್ಟ್ ಕಮಿಟಿಯವರು ಎಲ್ಲರಿಗೂ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಿದ್ದರು. ತುಂಗಭದ್ರಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ, ನಂತರ ಸರದಿ ಸಾಲಿನಲ್ಲಿ ನಿಂತು ಅಜ್ಜಯ್ಯನ ದರ್ಶನ ಪಡೆದರು.
ಬೆಳ್ಳಿ ರಥೋತ್ಸವ : ಇದೇ ದಿನಾಂಕ 18 ರ ಸೋಮವಾರ ಉಕ್ಕಡಗಾತ್ರಿಯಲ್ಲಿ ಕಡೇ ಕಾರ್ತಿಕೋತ್ಸವದ ಅಂಗವಾಗಿ ಅಜ್ಜಯ್ಯನ ಬೆಳ್ಳಿ ರಥೋತ್ಸವ ಮತ್ತು ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗದ್ದಿಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.