ಹರಿಹರ, ಡಿ. 12- ದಾವಣಗೆರೆಯಲ್ಲಿ ಇದೇ ದಿನಾಂಕ 23 ಮತ್ತು 24 ರಂದು ಅಖಿಲ ಭಾರತ ವೀರಶೈವ ಮಹಾಸಭಾದ 24 ನೇ ಮಹಾ ಅಧಿವೇಶನ ನಡೆಯಲಿದ್ದು, ನಾಡಿನ ಹಲವಾರು ಮಠಾಧೀಶರು, ವಿವಿಧ ಪಕ್ಷಗಳ ಮುಖಂಡರು, ಸಮಾಜದ ಗಣ್ಯರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವುದರಿಂದ, ಮಹಾ ಅಧಿವೇಶನ ಯಶಸ್ವಿಯಾಗಿಸುವ ದೃಷ್ಟಿಯಿಂದ ಹರಿಹರ ತಾಲ್ಲೂಕಿನ ಸಮಸ್ತ ವೀರಶೈವ ಸಮಾಜ ಬಾಂಧವರ ಸಭೆಯನ್ನು ಇದೇ ದಿನಾಂಕ 16 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ದೇವಸ್ಥಾನ ರಸ್ತೆಯ ರೇಣುಕಾ ಮಂದಿರದಲ್ಲಿ ಕರೆಯಲಾಗಿದೆ ಎಂದು ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಮಹಾ ಅಧಿವೇಶನದಲ್ಲಿ ರಾಜ್ಯದಾದ್ಯಂತ ಲಕ್ಷಾಂತರ ವೀರಶೈವ ಸಮಾಜದವರು ಭಾಗವಹಿಸಲಿದ್ದಾರೆ. ದಾವಣಗೆರೆಯ ಮಧ್ಯ ಕರ್ನಾಟಕ ಭಾಗದಲ್ಲಿ ಮಹಾ ಅಧಿವೇಶನ ನಡೆಯುವುದರಿಂದ ಇದೊಂದು ಐತಿಹಾಸಿಕ ಮಹಾ ಅಧಿವೇಶನವಾಗಿ ಮಾರ್ಪಾಡಾಗಲಿದೆ ಎಂದರು.
ಹರಿಹರ ತಾಲ್ಲೂಕಿನಲ್ಲೂ ಕೂಡ ವೀರಶೈವ ಸಮಾಜದವರು ಹೆಚ್ಚಿನ ಪ್ರಮಾಣದಲ್ಲಿ ಇರೋದರಿಂದ ಈ ಮಹಾ ಅಧಿವೇಶನದಲ್ಲಿ ಕನಿಷ್ಠ ಪಕ್ಷ 25 ಸಾವಿರಕ್ಕೂ ಹೆಚ್ಚು ವೀರಶೈವ ಸಮಾಜದವರು ಭಾಗವಹಿಸುವ ನಿರೀಕ್ಷೆ ಇದೆ.
ಮಹಾ ಅಧಿವೇಶನದಲ್ಲಿ ಭಾಗವಹಿಸುವ ವೀರಶೈವ ಸಮಾಜದವರಿಗೆ ನೋಂದಣಿ ಇರಲೇಬೇಕು ಎಂಬ ಭಾವನೆಗಳು ಬೇಡ. ನೋಂದಣಿ ಇಲ್ಲದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಐತಿಹಾಸಿಕ ಮಹಾ ಅಧಿವೇಶನದಲ್ಲಿ ಪಾಲ್ಗೊಂಡು ಸಮಾರಂಭಕ್ಕೆ ಸಾಕ್ಷಿ ಆಗುವಂತೆ ಹೇಳಿದರು.
ಕಾಂಗ್ರೆಸ್ ಮುಖಂಡ ಜಿ.ಬಿ. ಹಾಲೇಶಗೌಡ್ರು ಗುತ್ತೂರು ಮಾತನಾಡಿ, ವೀರಶೈವ ಮಹಾ ಅಧಿವೇಶನ ಯಶಸ್ವಿಯಾಗಿಸುವ ದೃಷ್ಟಿಯಿಂದ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ಕೊಟ್ಟು ಸಮಾಜ ಬಾಂಧವರಿಗೆ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಲಸಬಾಳು ಎಚ್.ಎಂ. ಶಿವಾನಂದಪ್ಪ, ಟಿ.ಜೆ. ಮುರುಗೇಶಪ್ಪ, ಜಿ.ಕೆ. ಮಲ್ಲಿಕಾರ್ಜುನ್, ವೀರೇಶ್ ಯಾದವಾಡ, ಕಂಚಿಕೇರಿ ಕರಿಬಸಪ್ಪ, ಶಶಿದರಗೌಡ, ಎನ್. ಸುರೇಶ್ ಸ್ವಾಮಿ, ಜಿ.ವಿ. ಪ್ರವೀಣ್, ಕರಿಬಸಪ್ಪ ಗುತ್ತೂರು, ಕೆ.ಸಿ. ಪಾಟೀಲ್, ಬಸವರಾಜ್ ಪಾಟೀಲ್, ಇತರರು ಹಾಜರಿದ್ದರು.