ರಾಘವೇಂದ್ರ ಗುರೂಜಿ
ದಾವಣಗೆರೆ, ಡಿ. 12- ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯೋಗ ಕಲೆ ಪ್ರಮುಖ ಪಾತ್ರ ವಹಿಸಿದೆ. ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ವಿಶ್ವಕ್ಕೆ ಭಾರತದ ಯೋಗ ಅತ್ಯದ್ಭುತ ಕೊಡುಗೆ ನೀಡಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಸಂಸ್ಥಾಪಕ ರಾಘವೇಂದ್ರ ಗುರೂಜಿ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಮೊನ್ನೆ ಆಯೋಜಿಸಿದ್ದ ವಿವೇಕ್ ಪೋಷಕರ ಕಾರ್ಯಾಗಾರದಲ್ಲಿ `ಕಾಡುವ ಬೆನ್ನು ನೋವು- ಇದಕ್ಕಿದೆ ಯೋಗದಲ್ಲಿ ಮದ್ದು ‘ ವಿಷಯ ಕುರಿತು ಅವರು ಮಾತನಾಡಿದರು.
ಯೋಗ ಭಾರತದ ಅತ್ಯಂತ ಪ್ರಾಚೀನವಾದ, ಅದ್ಭುತವಾದ ಜೀವನ ಕಲೆ. ಮನಸ್ಸನ್ನು ಹತೋಟಿಗೆ ತರುವ ಮೂಲಕ ಸಮಚಿತ್ತತೆ ಕಾಪಾಡುವುದು ಯೋಗದ ಮೂಲ ಉದ್ದೇಶ ವಾಗಿದ್ದು, ಮನಸ್ಸನ್ನು ಸುಂದರಗೊಳಿಸುವುದು ಯೋಗದ ಕ್ರಿಯೆ ಎಂದರು.
ಭಾರತ ಆರೋಗ್ಯಪೂರ್ಣವಾಗಿದೆಯೇ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ನಮ್ಮದು ಒತ್ತಡ, ಅವಸರದ ಬದುಕು. ಏನೇನೋ ಗಳಿಸಿ, ಕ್ರೋಢೀಕರಿಸಲು ಹೋಗಿ ದೇಹವನ್ನು ಕಾಯಿಲೆಯ ಗೂಡನ್ನಾಗಿಸಿಕೊಂಡಿದ್ದೇವೆ. ಶೇ. 85 ರಷ್ಟು ಜನ ಬೆನ್ನು ನೋವಿನಿಂದ ಬಳಲುತ್ತಿದ್ದು, ಶಾಲೆಗೆ ಹೋಗುವ ಮಕ್ಕಳೂ ಸಹ ಬೆನ್ನು ನೋವಿಗೆ ತುತ್ತಾಗಿದ್ದಾರೆ ಎಂದು ಹೇಳಿದರು.
ಬೆನ್ನಿನ ಬಗ್ಗೆ ಅರಿವು ಅಗತ್ಯ. ಇಡೀ ಶರೀರಕ್ಕೆ ಬೆನ್ನು ಆಧಾರಸ್ತಂಭ. ಬೆನ್ನು ಮೂಳೆಗಳು ನಾವು ಬಾಗಿಸಿದಂತೆಲ್ಲಾ ಬಾಗುತ್ತವೆ. ನಾವು ನೀಡುವ ಒತ್ತಡವನ್ನು ನೋವಿನ ಅನುಭವದ ಮೂಲಕ ಹೊರ ಹಾಕುತ್ತವೆ. ಇದೇ ನಾವು ಮಾಡಿಕೊಳ್ಳುವ ಸ್ವಯಂಕೃತ ಅಪರಾಧ ಎಂದರು.
ನಮ್ಮ ಶರೀರದಲ್ಲಿ ಒತ್ತಡ ಉಂಟಾದಾಗ ಬೆನ್ನು ಮೂಳೆಗಳು ಒಂದಕ್ಕೊಂದು ತಾಕಿ ನೋವು ಕಾಣಿಸಿಕೊಳ್ಳುತ್ತದೆ. ಇದು ಕಾಯಿಲೆ ಅಲ್ಲ. ಸ್ವಯಂಕೃತ ಅಪರಾಧದಿಂದ ಬಂದ ತೊಂದರೆ. ಇದಕ್ಕೆ ಯೋಗದಲ್ಲಿ ಮಾತ್ರ ಪರಿಹಾರವಿದೆ. ಯೋಗ ಚಿಕಿತ್ಸೆಯಲ್ಲಿ ಉತ್ತಮ ಮದ್ದಿದೆ ಎಂದು ಹೇಳಿದರು.
ಬೆನ್ನು ಮುಖ್ಯವಾದ ಅಂಗ. ಅದಕ್ಕೆ ಕುಳಿತುಕೊಳ್ಳುವ ಭಂಗಿ ಮುಖ್ಯ. ನೆಲದ ಮೇಲೆ ಕುಳಿತುಕೊಳ್ಳುವಾಗ ಮಣೆ ಬಳಕೆ ಮುಖ್ಯ. ವ್ಯಕ್ತಿಗತವಾಗಿ ಕಲಿತದ್ದನ್ನು ಸಮಾಜಕ್ಕೆ ಕೊಡುತ್ತೇವೆ. ಈ ಸಂಸ್ಕಾರ ಭಾರತದಲ್ಲಿ ಮಾತ್ರ ಸಾಧ್ಯ. ಮಲಗುವಾಗ ಭುಜ ಮತ್ತು ಕುತ್ತಿಗೆ ನಡುವೆ ಗ್ಯಾಪ್ ಇರಬಾರದು. ದಿಂಬು ಇಲ್ಲದಂತೆ ಮಲಗುವ ಕ್ರಮ ಉತ್ತಮ. ಹೊಕ್ಕಳ ಬಳಿ ಮಂಡಿ ಬರಬೇಕು. ನಿಲ್ಲುವುದು, ಕುಳಿತುಕೊಳ್ಳುವ ಹಾಗೂ ಮಲಗುವ ಕ್ರಮ ಉತ್ತಮ ಎಂದು ಮಾಹಿತಿ ನೀಡಿದರು.
ಕೊನೆ ಹಂತದಲ್ಲಿ ಯೋಗದ ಮೊರೆ ಹೋಗುತ್ತಾರೆ. ಅದರ ಬದಲು ನೋವು ಕಾಣಿಸಿಕೊಂಡ ತಕ್ಷಣ ಯೋಗಕ್ಕೆ ಬರುವುದು ಸೂಕ್ತ ಎಂದು ತಿಳಿಸಿದರು.
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ. ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ವಿಭಾಗದ ಮುಖಸ್ಥ ಡಾ. ಮೂಗನಗೌಡ, ಮಕ್ಕಳ ತಜ್ಞರಾದ ಡಾ. ಕೌಜಲಗಿ, ಡಾ. ಮೃತ್ಯುಂಜಯ, ಡಾ. ಮಧು ಪೂಜಾರ್, ಡಾ. ನವೀನ್ ನಾಡಿಗ್, ಸಿಬ್ಬಂದಿಗಳಾದ ಸಿ.ಎಂ. ಅಂಜಲಿ, ಸಂಜೀವ್, ಮಂಜುನಾಥ್, ಗೋವಿಂದ್, ಮತ್ತಿತರರು ಉಪಸ್ಥಿತರಿದ್ದರು.