ದಾವಣಗೆರೆ, ಡಿ. 12- ಪುಸ್ತಕಗಳು ಜ್ಞಾನ ದೀವಿಗೆಗಳು. ವಿದ್ಯಾರ್ಥಿಗಳಿಗೆ ದಾನಿಗಳಿಂದ ದೊರೆಯುತ್ತಿರುವ ಪುಸ್ತಕದ ಪ್ರಸಾದ ಇಡೀ ಜೀವಮಾನದುದ್ದಕ್ಕೂ ಪ್ರಸಾದವಾಗುತ್ತದೆ. ಭಾಷಾ ಸಂಪತ್ತು ಮತ್ತು ಶಬ್ಧ ಸಂಪತ್ತು ಹೆಚ್ಚಾಗಲು ಮಕ್ಕಳು ಪಠ್ಯ ಪುಸ್ತಕಗಳೊಂದಿಗೆ ಇತರೆ ಸಾಮಾನ್ಯ ಜ್ಞಾನ, ವ್ಯಾಕರಣ, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ಕರೆ ನೀಡಿದರು.
ನಗರದ ಈಶ್ವರಮ್ಮ ಶಾಲಾ ಸಭಾಂಗಣದಲ್ಲಿ ಡಾ.ಹೆಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಈಶ್ವರಮ್ಮ ಶಾಲಾಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಾಡಾಗಿದ್ದ ಪುಸ್ತಕ ವಾಚನ ಸಹಾಯ ಯೋಜನೆಯ 21 ಶಾಲೆಗಳ ಫಲಾನುಭವಿಗಳಿಗೆ ಪುಸ್ತಕ ವಿತರಣೆ `ಪುಸ್ತಕ ಪಂಚಮಿ’ಯ 14 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡ ಮಕ್ಕಳಿಗೆ ಪುಸ್ತಕಗಳೆಂಬ ಪ್ರಸಾದ ನೀಡಿದರೆ ಅದು ಜೀವನ ಪರ್ಯಂತ ವರ ಪ್ರಸಾದವಾಗಲಿದೆ. ಅನ್ನ ಪ್ರಸಾದ ಕೇವಲ ಒಂದು ದಿನಕ್ಕೆ ಮುಗಿಯುತ್ತದೆ ಎಂದರು.
ಪುಸ್ತಕ ಪಂಚಮಿ ಕಾರ್ಯಕ್ರಮ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುತ್ತದೆ. ಜ್ಞಾನ ವೃದ್ಧಿಗೆ ಕೊಡುಗೆ ನೀಡುವಂತಹದ್ದಾಗಿದೆ. ವಿದ್ಯಾರ್ಜನೆಗೆ ಅವಕಾಶ ದೊರೆತಾಗ ಮಕ್ಕಳ ಉನ್ನತಿ ಆಗಲಿದೆ. ಇದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಜ್ಞಾನ ಪಸರಿಸಲಿದೆ ಎಂದು ಹೇಳಿದರು.
ಪೋಷಕರಾಗಲೀ, ಶಿಕ್ಷಕರಾಗಲೀ ಜಾಣ ಮತ್ತು ದಡ್ಡ ಎಂದು ವಿಂಗಡಿಸದಿರಿ. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಕೀಳರಿಮೆ ಬೆಳೆಯಲಿದೆ. ಮನೆಯಲ್ಲಿ ತಾಯಂದಿರು ತಮ್ಮ ಮಕ್ಕಳಿಗೋಸ್ಕರ ಕನಿಷ್ಠ ಪಕ್ಷ ಒಂದು ಗಂಟೆ ಕಾಲ ಮೊಬೈಲ್ ಸ್ವಿಚ್ಆಫ್ ಮಾಡಿ ಮಕ್ಕಳನ್ನು ಓದಿಸುವ ಪ್ರಯತ್ನ ಮಾಡಿದ್ದೇ ಆದರೆ ಅವರ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ
ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ತಂದೆ-ತಾಯಿಗಳಿಗೂ ಅರಿವು ಮೂಡಲಿದೆ. ದಾವಣಗೆರೆಯಲ್ಲಿ ದಾನಿಗಳು, ಹೃದಯವಂತರಿದ್ದಾರೆ. ಅವರ ಸಲಹೆ – ಸಹಕಾರದೊಂದಿಗೆ ಮುನ್ನಡೆಯೋಣವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಶ್ರೀಮತಿ ಎ.ಆರ್. ಉಷಾ ರಂಗನಾಥ್ ಮಾತನಾಡಿ, ಒಂದು ಉತ್ತಮ ಪುಸ್ತಕ ನೂರು ಜನ ಸ್ನೇಹಿತರಿಗಿಂತ ಶ್ರೇಷ್ಠ. ಮಹಾತ್ಮರ ಬದುಕಿನ ಸಂದೇಶಗಳನ್ನೊಳಗೊಂಡ ಉತ್ತಮ ಪುಸ್ತಕಗಳನ್ನು ಓದುವುದರಿಂದ ಸಕಾರಾತ್ಮಕ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ತಜ್ಞ ಡಾ. ಸಿ.ಆರ್. ಬಾಣಾಪುರಮಠ ಅವರು, ಅನೇಕ ವಿದ್ಯಾಸಂಸ್ಥೆಗಳಿಗೆ ತಳಪಾಯ ಹಾಕಿದ ನಮ್ಮ ಅಜ್ಜ ಡಾ.ಹೆಚ್.ಎಫ್. ಕಟ್ಟಿಮನಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿದ್ದು, ದಾವಣಗೆರೆಯಲ್ಲಿ ಕಳೆದ 13 ವರ್ಷಗಳಿಂದ ಪುಸ್ತಕ ಪಂಚಮಿ ಕಾರ್ಯಕ್ರಮದ ಮೂಲಕ ಬಡ ವಿದ್ಯಾರ್ಥಿಗಳಿಗೆ ದಾನಿಗಳ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದರು.
ಈಶ್ವರಮ್ಮ ಶಾಲಾಡಳಿತ ಮಂಡಳಿ ಖಜಾಂಚಿ ಎ.ಪಿ. ಸುಜಾತ, ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್, ಪ್ರತಿಷ್ಠಾನದ ಸಹ ಸಂಚಾಲಕ ಆರ್.ಸಿ ಪುರಾಣಿಕ್ ಮಠ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಬೂಸ್ನೂರು ಸ್ವಾಗತಿಸಿದರು. ಶಿಕ್ಷಕಿ ಬಿ. ಶ್ರೀದೇವಿ ನಿರೂಪಿಸಿದರು.