ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತಿಗೋಸ್ಕರ ಬೇಸತ್ತ ಸಾರ್ವಜನಿಕರು

ಮಾನ್ಯರೇ, 

ಸ್ಮಾರ್ಟ್ ಸಿಟಿ ದಾವಣಗೆರೆ ನಗರ 4 ದಿಕ್ಕುಗಳಲ್ಲಿ ಶರವೇಗದಿಂದ ಬೆಳೆಯುತ್ತಲಿದೆ. ಸರ್ವತೋಮುಖ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ನಗರದಲ್ಲಿ ಸಾರ್ವಜನಿಕರು ತಮ್ಮ ಅಗತ್ಯ ಸೇವೆಗಳಿಗಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಪಡೆಯಲು ಮಹಾನಗರ ಪಾಲಿಕೆಗೆ ಹೋಗಲೇಬೇಕು. ಅದರಲ್ಲೂ ಪ್ರಮುಖವಾಗಿ ಇ-ಸ್ವತ್ತು ಪಡೆಯಲು ಸೈಟು, ಮನೆಗಳ ಹಾಗೂ ನೀರಿನ ಕಂದಾಯ ಕಟ್ಟಲು, ಖಾತೆ ವರ್ಗಾವಣೆ ಪಡೆಯಲು, ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲು ಮತ್ತು ಜನನ ಮರಣಗಳ ದಾಖಲೆ ಪಡೆಯಲು ಹೀಗೆ ಹಲವಾರು ಕೆಲಸ ಕಾರ್ಯಗಳಿಗೆ ಮಹಾನಗರ ಪಾಲಿಕೆಗೆ ಹೋಗಲೇಬೇಕು. 

ಆಧುನಿಕ ಜಗತ್ತು ಡಿಜಿಟಲ್ ಯುಗ ಆಗುತ್ತಿರುವುದರಿಂದ ಎಲ್ಲಾ ಸೇವಾ ಕಾರ್ಯಗಳ ಆನ್‌ಲೈನ್ ತಂತ್ರಜ್ಞಾನದ ಸಾಫ್ಟ್‌ವೇರ್ ಮುಖಾಂತರದಿಂದ ಸಾಗಲೇ ಬೇಕಾಗಿದೆ. ನಗರ ಬೆಳೆದಂತೆ ಮತ್ತು ಜನಸಂಖ್ಯೆ ಹೆಚ್ಚಾದಂತೆ ಮಹಾನಗರ ಪಾಲಿಕೆ ಹೆಚ್ಚು ಜನಸಂದಣೆಯಿಂದ ಕೂಡಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬ ಆಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತಿವೆ.

ಯಾವುದೇ ಆಸ್ತಿ ಮಾರಾಟ ಮಾಡಲು, ಖರೀದಿಸಲು, ಬ್ಯಾಂಕುಗಳಿಂದ ಸಾಲ ಪಡೆಯಲು ಹೀಗೆ ಎಲ್ಲಾ ಉದ್ದೇಶಕ್ಕೂ ಇ-ಸ್ವತ್ತುಗಳು ಬೇಕೇ ಬೇಕು ಎಂದು ಸರ್ಕಾರ ಕಡ್ಡಾಯ ಮಾಡಿದೆ. ಮುಂದಿನ ದಿನಗಳಲ್ಲಿ ಇದರ ಮೂಲ ಉದ್ದೇಶ ಒಳ್ಳೆಯದೇ ಇದ್ದರೂ ಸಹ ಸದ್ಯದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಆಧುನಿಕ ಆನ್‌ಲೈನ್‌ ಪದ್ಧತಿಗಳು ಪೂರ್ಣ ಮಾಹಿತಿ (ತರಬೇತಿ) ಇಲ್ಲದ ಕಾರಣ ಹಾಗೂ ಕಚೇರಿಯ ಕೆಲವು ಸಿಬ್ಬಂದಿಗಳು, ಗುಮಾಸ್ತರುಗಳು ಸಹ ಈ ಪದ್ದತಿಗೆ ಹೊಂದಿಕೊಳ್ಳದೇ ಗೊಂದಲ ಆಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಅನೇಕ ವಿಧಾನಗಳ ಮೂಲಕ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ಸರ್ಕಾರದ ಆದಾಯ (ಬೊಕ್ಕಸ) ಸಾರ್ವಜನಿಕರಿಂದ ತುಂಬುತ್ತಿದೆ. ತೆರಿಗೆ ಕಟ್ಟುವ ಸಾರ್ವಜನಿಕರ ಸೇವೆಗಳಿಗೆ ಸ್ಪಂದಿಸದೇ ಸಾಮಾನ್ಯ ಜನರನ್ನು ಕಡೆಗಣಿಸುತ್ತಿರುವುದು ಯಾವ ನ್ಯಾಯ. ಕೆಲವು ಅಧಿಕಾರಿಗಳು ಗುಮಾಸ್ತರುಗಳ ನಿರ್ಲಕ್ಷೆ ಮಾಡಿ ಸಾಮಾನ್ಯ ಜನರಿಗೆ ಸತಾಯಿಸುವುದು ವಿಳಂಬ ಮಾಡುವುದರಿಂದ ಇ-ಸ್ವತ್ತಿನ ಸಲುವಾಗಿ ಸಾಮಾನ್ಯ ಜನರು ಬೇಸತ್ತಿದ್ದಾರೆ. 

ತಮ್ಮ ವೈಯಕ್ತಿಕ ಕಷ್ಟ-ತೊಂದರೆಗಳಿಗೆ ತುರ್ತಾಗಿ ತಮ್ಮ ಆಸ್ತಿಯ ಮೇಲೆ ಸಾಲ ಪಡೆಯುವುದಾಗಲೀ, ಮಾರಾಟ ಮಾಡುವುದಾಗಲೀ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. 

ಇ-ಸ್ವತ್ತು ಸಿಗದೇ ವಿಳಂಬ ಆಗುತ್ತಿದೆ. ಇದರಿಂದ ಪ್ರತಿದಿನ ಕಚೇರಿಗಳಲ್ಲಿ ಎರಡು-ಮೂರು ಗಲಾಟೆಗಳು ವಾಗ್ವಾದಕ್ಕಿಳಿದು ಮಾತಿನ ಚಕಮಕಿಗಳನ್ನು ಮಾಡುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ. ಲಂಚ ಕೊಡದೆ ಕಚೇರಿಗಳಲ್ಲಿ ಯಾವುದೇ ಕೆಲಸವಾಗುವುದು ಕಷ್ಟಕರವಾಗುತ್ತಿದೆ. ಕೆಲವು ಅಧಿಕಾರಿಗಳು ಲಂಚ ಕೊಡದಿದ್ದರೆ ತಪ್ಪು ಹುಡುಕಿ ನೂರೆಂಟು ಕೊಕ್ಕೆಗಳನ್ನು ಇಡುತ್ತಾರೆ. ಲಂಚ ಕೊಟ್ಟರೆ ಎಲ್ಲಾ ಮಾಯವಾಗುತ್ತವೆ. 

ಲಂಚ ಕೊಟ್ಟವರಿಗೆ ಒಂದು ಕಾನೂನು, ಕೊಡದವರಿಗೆ ಇನ್ನೊಂದು ಕಾನೂನು, ಸರ್ಕಾರ ಕಾನೂನು ಮಾಡಿರುವ ಮೂಲ ಉದ್ದೇಶ ಜನಸಾಮಾನ್ಯರಿಗೆ ಮತ್ತು ದೇಶಕ್ಕೆ ಅನುಕೂಲವಾಗಲಿ ಎಂಬ ಉದ್ದೇಶ. ಆದರೆ ಕೆಲವು ಅಧಿಕಾರಿಗಳು ಆ ಕಾನೂನುಗಳನ್ನು ದುರುಪಯೋಗವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಂಕಷ್ಟದಲ್ಲಿ ಇರುವ ಸಾಮಾನ್ಯ ಜನರು ಬೆಸತ್ತು ನನ್ನ ಕೆಲಸ ಆದರೆ ಸಾಕು ಎಂದು ಲಂಚ ಕೊಟ್ಟು ಕೆಲಸ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ, ಜನರು ಜಾಗೃತರಾಗಬೇಕು, ಕಾನೂನು ರಕ್ಷಣೆ ಪಡೆಯಬೇಕು, ಒಗ್ಗಟ್ಟಾಗಬೇಕು ಹಾಗೂ ಮಾಧ್ಯಮಗಳ ಸಹಾಯ, ಸಲಹೆ ಪಡೆದು ಭ್ರಷ್ಟಾಚಾರ ತಡೆಯಬೇಕು. ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಡಬೇಕು. 

ಜನಪ್ರತಿನಿಧಿಗಳು ಹಾಗೂ ಉನ್ನತ ಸ್ಥಾನದಲ್ಲಿ ಇರುವ ಮೇಲಾಧಿಕಾರಿಗಳು ಇಂತಹ ಸಾರ್ವಜನಿಕರ ದಿನನಿತ್ಯದ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ಗಮನಹರಿಸಿ, ಪರಿಹರಿಸಿ ಜನರಿಗೆ ವಿಳಂಬವಾಗದೇ ತುರ್ತಾಗಿ ನೀಡುವಂತೆ ಸರಿಪಡಿಸಬೇಕು. 

ಜನಸಂಪರ್ಕ ಸಭೆ ನಡೆಸಿ ಅನುಕೂಲ ಮಾಡಿಕೊಟ್ಟು ಸಕಾಲಕ್ಕೆ ಸೌಲಭ್ಯ ಮಾಡಿಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ದೇಶದಲ್ಲಿ ಬೇರೂರಿ ತಾಂಡವವಾಡುತ್ತಿರುವ ಲಂಚದ ಪಿಡುಗನ್ನು ತೊಲಗಿಸಿದರೆ ಮಾತ್ರ ನಮ್ಮ ದೇಶ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ನೊಂದು ಬೇಸತ್ತ ಸಾಮಾನ್ಯ ಜನರಲ್ಲಿ ನಾನು ಒಬ್ಬ.

– ಹೆಚ್.ವಿ. ಮಂಜುನಾಥಸ್ವಾಮಿ, 98448 82366

error: Content is protected !!