ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ದುಡ್ಡು ಮಾಡಿ ಮುಂದಿನ ಲೋಕಸಭಾ ಚುನಾವಣೆಗೆ ಬಳಸಲು ಉಪಯೋಗಿಸುತ್ತಿದ್ದು, ನಮ್ಮ ರಾಜ್ಯದ ಪಕ್ಕದ ರಾಜ್ಯವಾದ ತೆಲಂಗಾಣದಲ್ಲಿ ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಮುಖಂಡರುಗಳು ನಮ್ಮ ಹಣವನ್ನು ಹಂಚಿ ಗೆಲುವ ಸಾಧಿಸಿದ್ದಾರೆ.
– ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ
ಹೊನ್ನಾಳಿ, ಡಿ. 9- ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ಪ್ರಸಾದ್ ಸಾಹು ಅವರ ಮನೆ ಮತ್ತು ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ 600 ಕೋಟಿ ರೂ. ಕಪ್ಪು ಹಣ ಸಿಕ್ಕಿದ್ದು, ಇದರಿಂದ ಕಾಂಗ್ರೆಸ್ ಮುಖಂಡರ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿ ಕಾರಿದರು.
ಶನಿವಾರ ಬಿಜೆಪಿ ಮಂಡಲ ವತಿಯಿಂದ ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ಪ್ರಸಾದ್ ಸಾಹು ಬಳಿ ದೊರಕಿರುವ ನಗದು ಕಪ್ಪು ಹಣದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ನ ರಾಜ್ಯಸಭಾ ಸದಸ್ಯನ ಮನೆಯಲ್ಲಿ ನೋಟಿನ ಕಂತೆಗಳನ್ನು ಇಟ್ಟಿಗೆ ರೂಪದಲ್ಲಿ ಜೋಡಿಸಲಾಗಿತ್ತು. ಹಣವನ್ನು ಟ್ರಕ್ನಲ್ಲಿ ಸಾಗಿಸಲಾಗಿದೆ. ತಕ್ಷಣ ರಾಜ್ಯಸಭಾ ಸದಸ್ಯನನ್ನು ಬಂಧಿಸಿ ಸೂಕ್ತ ತನಿಖೆ ನಡೆಸ ಬೇಕು ಎಂದು ಅವರು ಒತ್ತಾಯಿಸಿದರು.
ಈಚೆಗೆ ನಡೆದ 5 ರಾಜ್ಯದ ಚುನಾವಣಾ ಫಲಿತಾಂಶಗಳಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿರುವುದು ಕಾಂಗ್ರೆಸ್ನವರಿಗೆ ಇರುಸುಮುರುಸಾಗಿ 28 ಕಿಚಡಿ ಪಕ್ಷಗಳ ಐಎನ್ಡಿಐಎ ಸಭೆ ಕರೆದು ಸಭೆಗೆ ಕೆಲ ಪಕ್ಷಗಳ ಮುಖಂಡರುಗಳು ಗೈರಾಗುವ ಮುನ್ಸೂಚನೆ ಕಂಡು ಸಭೆಯನ್ನು ಮುಂದಕ್ಕೆ ಹಾಕಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ನೂತನವಾಗಿ ಕಟ್ಟಿದ ಲೋಕಸಭಾ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಅನೇಕ ಕಾಂಗ್ರೆಸ್ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಆದಾಯಕ್ಕೆ ಕುಂದು ಬಂತಲ್ಲ ಎನ್ನುವ ಕಾರಣಕ್ಕೆ ಹೊರತು ಬೇರೇನೂ ಅಲ್ಲ ಎಂದ ಅವರು, ದೇಶ ಹಾಳಾದರೂ ಪರವಾಗಿಲ್ಲ. ತಮ್ಮ ಆದಾಯಕ್ಕೆ ಧಕ್ಕೆ ಬರಬಾರದು ಎನ್ನುವ ನೀತಿಯನ್ನು ಕಾಂಗ್ರೆಸ್ ಮುಖಂಡರು ಅನುಸರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲುವುದು ಗ್ಯಾರಂಟಿ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಬಹುದೊಡ್ಡ ಬಲ ಬಂದಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಮಾಜಿ ಅಧ್ಯಕ್ಷ ಡಿ.ಜಿ.ರಾಜಪ್ಪ, ಮುಖಂಡರುಗಳಾದ ಅರಕೆರೆ ನಾಗರಾಜ್, ದಿಡಗೂರ ಪಾಲಾಕ್ಷಪ್ಪ, ಎ.ಜಿ.ಮಹೇಂದ್ರ ಗೌಡ, ನೆಲಹೊನ್ನೆ ಮಂಜುನಾಥ್, ಸಿ.ಆರ್.ಶಿವಾನಂದ, ಸುರೇಂದ್ರನಾಯ್ಕ, ಮಾರುತಿನಾಯ್ಕ ಇತರರು ಇದ್ದರು.
ಜಾರ್ಖಂಡ ರಾಜ್ಯಸಭಾ ಸದಸ್ಯ ಧೀರಜ್ಪ್ರಸಾದ್ ಸಾಹು ಅವರ ಪ್ರತಿಕೃತಿ ದಹಿಸಲಾಯಿತು. ಇದಕ್ಕು ಮುನ್ನ ಟಿಬಿ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೈಕ್ ರಾಲಿ ನಡೆಸಲಾಯಿತು.