ಬೆಳಗಾವಿ ಅಧಿವೇಶನದಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಒತ್ತಾಯ
ಕುಡಿಯುವ ನೀರಿನ ಅನುದಾನ ಡಿಸಿಗೆ ಬದಲು ಜಿ.ಪಂ.ಗೆ ನೀಡಲು ಮನವಿ
ಅಧಿವೇಶನದಲ್ಲಿ ಶಾಸಕರ ಗೈರು ಹಾಜರಿ ಬಗ್ಗೆ ಬೇಸರ
ಬೆಳಗಾವಿ, ಡಿ.9- ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಶುಕ್ರವಾರ ಶಾಸಕ ಬಿ.ಪಿ. ಹರೀಶ್ ಅವರು ಹರಿಹರ ಕ್ಷೇತ್ರದಲ್ಲಿ ಭತ್ತ ಬೆಳೆಯದ ಭದ್ರಾ ಅಚ್ಚುಕಟ್ಟಿನ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಅಲ್ಲದೆ, ಅಧಿವೇಶನದಲ್ಲಿ ಮೂರೂ ಪಕ್ಷಗಳ ಶಾಸಕರು ಗಣನೀಯ ಸಂಖ್ಯೆಯಲ್ಲಿ ಗೈರು ಹಾಜರಾಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕ ಹರೀಶ್, ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಕ್ಷೇತ್ರದ ಕೆಲಸ ಮಾಡುವುದಕ್ಕಾಗಿ ಎಂಬುದನ್ನು ಪಕ್ಷಾತೀತವಾಗಿ ಎಲ್ಲಾ ಶಾಸಕರು ಗಮನದಲ್ಲಿಟ್ಟುಕೊಂಡು ಅಧಿವೇಶನಕ್ಕೆ ಹಾಜರಾಗಬೇಕು ಎಂದರು.
ಬಿಜೆಪಿಯ ನಾವು ರೈತರ ಹೆಸರಿನಲ್ಲಿ ಮತ್ತು ಕಾಂಗ್ರೆಸ್ ಪಕ್ಷದವರು ಅಭಯ ಹಸ್ತದ ಹೆಸರಿನಲ್ಲಿ ಹಾಗೂ ಜೆಡಿಎಸ್ ಪಕ್ಷ ದವರು ತೆನೆ ಹೊತ್ತ ರೈತ ಮಹಿಳೆಯ ಹೆಸರಿನಲ್ಲಿ ಗೆದ್ದು ಬಂದಿದ್ದೇವೆ. ಆದರೆ ವಿಧಾನಸಭೆ ಅಧಿವೇಶನ ದಲ್ಲಿ ಎಲ್ಲಾ ಶಾಸಕರು, ಸಚಿವರು ಕಡ್ಡಾಯವಾಗಿ ಹಾಜರಿದ್ದು, ಬರಗಾಲ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ
ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಅಧಿವೇಶನಕ್ಕೆ ಗೈರುಹಾಜರಾದರೆ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡಂತೆ ಎಂದು ಹರೀಶ್ ಹೇಳಿದಾಗ ಅಧಿವೇಶನದಲ್ಲಿದ್ದವರು ಮೌನವಾಗಿದ್ದರು.
ಪರಿಹಾರಕ್ಕೆ ಒತ್ತಾಯ : ಹರಿಹರ ತಾಲ್ಲೂಕು ಶೇ. 80 ರಷ್ಟು ನೀರಾವರಿ ಪ್ರದೇಶವಾಗಿದ್ದು, ಈ ಬಾರಿ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗದ ಕಾರಣ ನಾಲೆಗಳಲ್ಲಿ ಬಿಡುಗಡೆ ಮಾಡಿದ್ದ ನೀರಿನ ಹರಿವು ಕಡಿಮೆ ಇದ್ದುದರಿಂದ ಅಚ್ಚುಕಟ್ಟಿನ ಕೊನೆ ಭಾಗಗಳಿಗೆ ನೀರು ತಲುಪಲಿಲ್ಲ.
ಇದರಿಂದಾಗಿ ಅಚ್ಚುಕಟ್ಟಿನ ಶೇ. 40 ರಷ್ಟು ರೈತರು ಭತ್ತದ ನಾಟಿ ಮಾಡಲಿಲ್ಲ. ಬೇಸಿಗೆ ಬೆಳೆಯೂ ಇರದ ಕಾರಣ ಬೆಳೆ ವಂಚಿತ ಆ ರೈತರಿಗೆ ಪರಿಹಾರ ನೀಡಬೇಕೆಂದು ಹರೀಶ್ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಬೆದ್ದಲು ರೈತರಿಗೆ ನೀಡುವ ಬೆಳೆ ಹಾನಿ ಪರಿಹಾರ 2 ಸಾವಿರ ಬಹಳ ಕಡಿಮೆ ಇದ್ದು, ಇದನ್ನು ಹೆಚ್ಚಿಸಬೇಕು ಮತ್ತು ಬರಗಾಲದ ಕಾರಣ ಫೆಬ್ರವರಿ -ಮಾರ್ಚ್ ವೇಳೆಗೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿಗಾಗಿ ಸರ್ಕಾರ ಅನುದಾನವನ್ನು ಜಿಲ್ಲಾಧಿಕಾರಿಗಳ ಬದಲಾಗಿ ಜಿ.ಪಂ.ಗೆ ನೀಡಬೇಕೆಂದು ಶಾಸಕ ಹರೀಶ್ ಅವರು ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.