ರಾಣೇಬೆನ್ನೂರು, ಡಿ.10- ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 120 ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ನೀಡದೇ ಊಟ ಕೇಳಿದ ಮಕ್ಕಳಿಗೆ ಮನಸೋ ಇಚ್ಛೆ ಥಳಿಸಿದ ವಾರ್ಡನ್ ಅವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿ, ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಹೋರಾಟ ಧರಣಿ ನಡೆಸಿದರು.
ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಬಾರಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರೇಷ್ಮಾ ಕೌಸರ್ ಬೇಗಂ ಅವರು, ವಾರ್ಡನ್ ಬದಲಾವಣೆ ಮಾಡಿ, ಕೊಟ್ರೇಶ್ ಹಿರೇಮಠ ಅವರನ್ನು ತಾತ್ಕಾಲಿಕ ನೇಮಕ ಮಾಡಿ ಆದೇಶ ಹೊರಡಿಸಿದರು. ಎಲ್ಲಾ ಮೂಲಭೂತ ಸೌಕ ರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಯಿತು. ನಿಯೋಜನೆ ಆದೇಶ ಹಿಂಪಡೆದು ಸದರಿ ವಾರ್ಡ ನ್ ಸ್ಥಾನಕ್ಕೆ ಸುಜಾತ ಕಡೇಮನಿ ಅವರನ್ನು ನೇಮಕ ಮಾಡಲಾಯಿತು. ಸಂಪೂರ್ಣ ಆರೋಪದ ಕುರಿತು 24 ಗಂಟೆಗಳ ಒಳಗೆ ಸತ್ಯ ವರದಿ ನೀಡಲು ಆದೇಶ ಹೊರಡಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಣ್ಣಪ್ಪ ಹೆಗಡೆ, ಕಾನೂನು ಪರಿವೀಕ್ಷಣಾಧಿಕಾರಿ ಬಸವನಾಯ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಎಸ್.ಜಿ. ಮಜೀದ್ ಶ್ರಮವಹಿಸಿ, ವಾರ್ಡನ್ ಮೇಲೆ ಎಫ್‌ಐಆರ್ ದಾಖಲಿಸಿದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆದ ತಕ್ಷಣ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ವಸತಿ ಮೇಲ್ವಿಚಾರಕಿಯನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದರು.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲು ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇಷ್ಮಾ ಕೌಸರ್ ಬೇಗಂ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರೂ ಕೂಡ ನಿರ್ಲಕ್ಷ್ಯ ವಹಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ವಿದ್ಯಾರ್ಥಿಗಳಿಗೆ ಆದ ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿಲ್ಲ ಎಂದು ಎಸ್ಎಫ್ಐ ಆರೋಪಿಸಿತ್ತು ಸುದ್ದಿ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಮಧ್ಯಸ್ಥಿಕೆ ವಹಿಸಿ ಚಿಕಿತ್ಸೆ ಕೊಡಿಸಿದರು.