ಕುಲಶಾಸ್ತ್ರೀಯ ಅಧ್ಯಯನ ಕುರಿತು ನಾಳೆ ಸಂವಾದ

ದಾವಣಗೆರೆ, ಡಿ. 8-  ಅಖಿಲ ಭಾರತ ವಿಶ್ವಕರ್ಮ ಪರಿಷತ್ತು, ಸಮಾಜದ ಮತ್ತು ಸಂಘ-ಸಂಸ್ಥೆಗಳು, ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಾಡಿದ್ದು ದಿನಾಂಕ 10 ರ ಭಾನುವಾರ ಬೆಳಿಗ್ಗೆ 11ಕ್ಕೆ ಚನ್ನಗಿರಿ ತಾಲ್ಲೂಕು ವಡ್ನಾಳು ಗ್ರಾಮದ ಕಾಶಿಮಠದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಶಂಕರಾತ್ಮಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವಕರ್ಮ ಸಮಾಜದ ಇತಿಹಾಸದ ಬಗ್ಗೆ ಅಧ್ಯಯನವನ್ನು ಮೈಸೂರು ವಿಶ್ವವಿದ್ಯಾನಿಲಯದ ಮೂಲಕ ನಡೆಸಲಾಗುತ್ತಿದ್ದು, ಅನೇಕ ತಜ್ಞರ ತಂಡಗಳು ಆಗಮಿಸಲಿವೆ. ಈಗಾಗಲೇ ರಾಜ್ಯದ 22 ಜಿಲ್ಲೆಗಳಲ್ಲಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ದಾವಣಗೆೆರೆ ಜಿಲ್ಲೆಯಲ್ಲೂ ವಿಶ್ವಕರ್ಮ ಸಮಾಜದ ಪರಂಪರೆ, ಇತಿಹಾಸ, ಇಲ್ಲಿನ ಜನರ ಜೀವನ ನಿರ್ವಹಣೆ, ಬಳಸುವ ಭಾಷೆ, ಆಚಾರ, ವಿಚಾರ, ದೇವತಾರಾಧನೆ ಒಳಗೊಂಡಂತೆ ಸಂಪೂರ್ಣವಾದ ಅಧ್ಯಯನ ನಡೆಸಲು ಈ ಕಾರ್ಯಕ್ರಮವನ್ನು ಸರ್ಕಾರದಿಂದಲೇ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ಡಾ. ಡಿ.ಸಿ. ನಂಜುಂಡ, ಡಾ. ಮಹಾದೇವ್, ಡಾ. ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಳ್ಳುವರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ತು ಅಧ್ಯಕ್ಷ ಎಂ.ಇ. ಮೌನೇಶ್ವರಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ. ಕಾಳಾಚಾರ್, ಎಸ್. ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಪ್ರಸ್ತುತ ವಿಶ್ವಕರ್ಮ ಸಮಾಜದ ಪ್ರವರ್ಗ 2 ಎ ಮೀಸಲಾತಿಯನ್ನು ಹೊಂದಿದೆ. ಬೇರೆ  ಪಂಗಡಕ್ಕೆ ಸೇರಿಸಬೇಕೆಂಬ ಒತ್ತಾಯ ಕೂಡ ನಮ್ಮದಲ್ಲ. ಪ್ರವರ್ಗ 2 ಎ ಒಳ ಮೀಸಲಾತಿ ನೀಡಬೇಕೆಂದರು.

ಮುಂದಿನ ದಿನಗಳಲ್ಲಿ ಮೀಸಲಾತಿ, ಅನುದಾನ, ಯೋಜನೆ, ಕಾರ್ಯಕ್ರಮ ರೂಪಿಸಲು ಅನುಕೂಲವಾಗುವ ಹಾಗೆ ಕುಲಶಾಸ್ತ್ರೀಯ ಅಧ್ಯ ಯನ ನಡೆಸಲಾಗುತ್ತಿದೆ. ಹಿಂದಿನ ಸರ್ಕಾರದ ಅವ ಧಿಯಲ್ಲಿ ಅನುಮತಿ ನೀಡಿತ್ತು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಇ. ಮೌನೇಶ್ವರಚಾರ್, ಕಾಡಜ್ಜಿ ಕಾಳಾಚಾರ್, ಬಾವಿಹಾಳ್ ನಾಗರಾಜಚಾರ್, ಷಣ್ಮುಖಚಾರ್ ಮತ್ತಿತರರಿದ್ದರು. 

error: Content is protected !!