ನಗರದಲ್ಲಿ ನಾಳೆಯಿಂದ `ಶರಣರು ಕಂಡ ಶಿವ’ ಪ್ರವಚನ ಮಾಲೆ

ನಗರದಲ್ಲಿ ನಾಳೆಯಿಂದ `ಶರಣರು ಕಂಡ ಶಿವ’ ಪ್ರವಚನ ಮಾಲೆ

ದಾವಣಗೆರೆ, ಡಿ.2- ನಿರಾಕಾರ ಜ್ಯೋತಿ ಸ್ವರೂಪನಾಗಿರುವ ಪರಮಾತ್ಮ ಅರ್ಥಾತ್ ಭಗವಂತನನ್ನು ಸರ್ವರಿಗೂ ಪರಿಚಯಿಸುವ ನಿಟ್ಟಿನಲ್ಲಿ ಸುದೀರ್ಘ 30 ದಿನಗಳ `ಶರಣರು ಕಂಡ ಶಿವ’ ಪ್ರವಚನ ಮಾಲೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 4  ರಿಂದ ಇದೇ ದಿನಾಂಕ 30 ರವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾನಗರ ಶಾಖಾ ಕೇಂದ್ರದ ವತಿಯಿಂದ ಕೇಂದ್ರದ ಆವರಣದಲ್ಲಿ ಈ ಪ್ರವಚನ ನಡೆಯಲಿದೆ ಎಂದು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ತಿಳಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಗವಂತನ ರೂಪವೇನು?, ಅವನ ಪಾತ್ರವೇನು?, ಅವನ ಸ್ಮರಣೆಯಿಂದ ನಮಗೆ ಸಿಗಬಹುದಾದ ಲಾಭವೇನು? ಎಂಬಿತ್ಯಾದಿ ವಿಷಯಗಳು ಪ್ರವಚನ ಮಾಲೆಯಲ್ಲಡಗಿವೆ ಎಂದು ಹೇಳಿದರು.

ಪ್ರವಚನದ ಮುಖ್ಯ ಉದ್ದೇಶ : ಅರಿತರೆ ಶರಣರು, ಮರೆತರೆ ಮಾನವರು ಎಂದರೇನು?, ಶರಣರಿಗೂ-ಶಿವನಿಗೂ ಇರುವ ಸಂಬಂಧವೇನು?, ಶಂಕರನಿಗೂ-ಪರಮಾತ್ಮ ಶಿವನಿಗೂ ಇರುವ ಸಂಬಂಧವೇನು?, ಜ್ಯೋತಿರ್ಲಿಂಗಗಳಿಗೂ-ಶಿವನಿಗೂ ಇರುವ ಸಂಬಂಧವೇನು?, ಸ್ಥಾವರ ಲಿಂಗಗಳಿಗೂ, ಅಂಗೈ ಮೇಲಿನ ಲಿಂಗಗಳಿಗೂ ಸಂಬಂಧವಿದೆಯೇ?, ಶರಣರು ಕಂಡ ಶಿವನಿಗೂ, ಪುರಾಣದ ಶಿವನಿಗೂ ಇರುವ ವ್ಯತ್ಯಾಸವೇನು? ಶರಣರು ಕಂಡ ಶಿವನಿಗೂ-ಬ್ರಹ್ಮ, ವಿಷ್ಣು, ಶಂಕರಾದಿ ಗೃಹಸ್ಥ ದೇವತೆಗಳಿಗಿರುವ ವ್ಯತ್ಯಾಸವೇನು? ಸೇರಿದಂತೆ, ಇತರೆ ವಿಚಾರಗಳು ಪ್ರವಚನದ ಮುಖ್ಯಾಂಶಗಳಾಗಿವೆ.

ಜೀವ ಎಂದರೇನು? ಜೀವ, ನಿರ್ಜೀವಗಳ ವ್ಯತ್ಯಾಸವೇನು?, ನಾನು ಯಾರು? ನೀನು ಯಾರು? ಎಲ್ಲರೂ ಯಾರು?, ಪುರುಷ ಎಂದರೇನು? ಗಂಡು ಎಂದರೇನು? ಹೆಣ್ಣು ಎಂದರೇನು?, ಜನನ ಯಾರಿಗೆ? ಮರಣ ಯಾರಿಗೆ?, ನೀನು ಹುಟ್ಟಿ ಬರಲು ಕಾರಣವೇನು?, ನೀನು ಸತ್ತ ಮೇಲೆ ಎಲ್ಲಿಗೆ ಹೋಗುವೆ?, ಮಾನಸಿಕ ಶಾಂತಿ, ಮಾನಸಿಕ ಆರೋಗ್ಯ ಪಡೆಯುವ ವಿಧಾನವೇನು?, ಭಾರತದ ಭವಿಷ್ಯವೇನು? ವಿಶ್ವದ ಭವಿಷ್ಯವೇನು?, ಪಾಪ-ಪುಣ್ಯ, ಧರ್ಮ-ಕರ್ಮಗಳ ರಹಸ್ಯವೇನು?, ಪರಮಾತ್ಮ ಎಂದರೆ ಯಾರು? ಆತ ಎಲ್ಲಿದ್ದಾನೆ? ಆತನನ್ನು ನೋಡಲು ಸಾಧ್ಯವೇ? ಇತ್ಯಾದಿ ಪ್ರಶ್ನೆಗಳಿಗೆ ಪ್ರವಚನದಲ್ಲಿ ಉತ್ತರ ಸಿಗುತ್ತವೆ.

ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ನಿರ್ದೇಶಕರೂ, ಅಧ್ಯಾತ್ಮಿಕ ಮಾಸ ಪತ್ರಿಕೆ `ವಿಶ್ವ ನವ ನಿರ್ಮಾಣ’ದ ಸಂಪಾದಕರೂ, ಬಾಲ ಬ್ರಹ್ಮಚಾರಿಗಳೂ, 84 ವರ್ಷದ ಮಹಾನ್ ತಪಸ್ವಿಗಳೂ ಆದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋುಷಿಗಳವರು ಈ ಪ್ರವಚನವನ್ನು ನಡೆಸಿಕೊಡಲಿದ್ದಾರೆ.

ನಾಡಿದ್ದು ದಿನಾಂಕ 4 ರಿಂದ ಇದೇ ದಿನಾಂಕ 30ರವರೆಗೆ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ಒಂದು ಗಂಟೆ ಕಾಲ ಪ್ರವಚನ ನಡೆಯಲಿದ್ದು, ಸಾರ್ವಜನಿಕರು ಪ್ರತಿದಿನವೂ ಪ್ರವಚನದಲ್ಲಿ ಭಾಗವಹಿಸುವುದರ ಮೂಲಕ ಪರಮಾತ್ಮನ ಸಂದೇಶವನ್ನು ಅರಿತುಕೊಂಡು ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಗೀತಾಜಿ ಕೇಳಿಕೊಂಡರು.

ಉದ್ಘಾಟನಾ ಸಮಾರಂಭ : ನಾಡಿದ್ದು ದಿನಾಂಕ 4ರ ಸೋಮವಾರ ಸಂಜೆ 6 ಗಂಟೆಗೆ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ `ಶರಣರು ಕಂಡ ಶಿವ’ ಪ್ರವಚನ ಮಾಲಿಕೆಯ ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿದೆ. ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಪ್ರಧಾನ ಕೇಂದ್ರದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಉಪವಿಭಾಗಾಧಿಕಾರಿ ಶ್ರೀಮತಿ ಎನ್.ದುರ್ಗಾಶ್ರೀ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು,  ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಕಟ್ಟಡದ ಭೂ ದಾನಿ ಶ್ರೀಮತಿ ಲಕ್ಷ್ಮಮ್ಮ ದ್ಯಾಮಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಸ್ಥೆಯ ಧ್ಯೇಯ : ಮಾನವರು, ದೇವಾತ್ಮರು, ಪುಣ್ಯಾತ್ಮರು, ಮಹಾತ್ಮರು ಹೀಗೆ ಪ್ರತಿಯೊಬ್ಬರೂ ಸಂದರ್ಭಕ್ಕನುಗುಣವಾಗಿ ಪರಮಾತ್ಮನನ್ನು ಸ್ಮರಿಸುತ್ತಾರೆ. ಸ್ವಯಂ ಪರಮಾತ್ಮನೇ ಸ್ಥಾಪಿಸಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು, ಸಾಮಾನ್ಯ ಮಾನವನನ್ನು ಮಹಾ ಮಾನವನನ್ನಾಗಿ ಪರಿವರ್ತನೆ ಮಾಡುವ ದಿಸೆಯಲ್ಲಿ ಸೇವೆ ಸಲ್ಲಿಸುತ್ತಿದೆ. ವಿಶ್ವ ಪರಿವರ್ತನೆಗೆ ಬದ್ಧವಾಗಿರುವ ಈ ಸಂಸ್ಥೆಯು ವಿಶ್ವ ಭ್ರಾತೃತ್ವದಲ್ಲಿ ತನ್ನದೇ ಆದ ವಿಶಿಷ್ಟ-ಮಾದರಿ-ಅರ್ಥಪೂರ್ಣ ಸೇವೆ ಸಲ್ಲಿಸುತ್ತಿರುವ ಏಕೈಕ ಅಧ್ಯಾತ್ಮಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಸಂಸ್ಧೆಯು ಜಗತ್ತಿನಾದ್ಯಂತ 140 ರಾಷ್ಟ್ರಗಳಲ್ಲಿ ತನ್ನ ಸೇವಾ ಕೇಂದ್ರವನ್ನು ಹೊಂದಿದ್ದು, ವಿಶ್ವದ ಎಲ್ಲಾ ಸೇವಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 6.30 ರಿಂದ 8 ರವರೆಗೆ ನಡೆಯಲಿರುವ ಪ್ರವಚನದಲ್ಲಿ ಭಾಗವಹಿಸುವ ಲಕ್ಷಾಂತರ ಜನರಿಗೆ ಪರಮಾತ್ಮನ ಸಂದೇಶವನ್ನು ಉಚಿತವಾಗಿ ನೀಡುತ್ತಿದೆ ಎಂದು ಬ್ರಹ್ಮಾಕುಮಾರಿ ಗೀತಾಜಿ ವಿವರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ, ಶಿವ ಸಹಕಾರಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಜಶೇಖರ್, ನಿವೃತ್ತ ಶಿಕ್ಷಕ ಹೆಚ್.ಎಂ. ಶಂಕರಯ್ಯ, ಲೆಕ್ಕಪರಿಶೋಧಕ ಭೀಷ್ಮಣ್ಣ, ಶ್ರೀಮತಿ ಯಶೋಧ, ಶ್ರೀಮತಿ ಸವಿತಾ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!