ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬೆಳಗಾವಿ ಅಧಿವೇಶನದ ಒಳ – ಹೊರಗೆ ಹೋರಾಟ

ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬೆಳಗಾವಿ ಅಧಿವೇಶನದ ಒಳ – ಹೊರಗೆ ಹೋರಾಟ

ನಾನು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಪದೇ ಪದೇ ನಾನೇ ಹೇಳಿಕೊಂಡರೆ ಅದು ನನ್ನ ವರ್ಚಸ್ಸಿಗೆ ಕುಂದು ಬರುತ್ತದೆ. ಆದ್ದರಿಂದ ಪಕ್ಷವು ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಸಮೀಕ್ಷೆ ಮಾಡಿ ನಿರ್ಧಾರ ಕೈಗೊಳ್ಳಲಿ.

– ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

ದಾವಣಗೆರೆ, ಡಿ.2- ರಾಜ್ಯ ಕಾಂಗ್ರೆಸ್ ಸರ್ಕಾ ರದ ಆಡಳಿತ ವೈಫಲ್ಯ ಹಾಗೂ ಬರ ನಿರ್ವಹಣೆ ಯಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಸೇರಿ ಬೆಳಗಾವಿ ಅಧಿವೇಶನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನೀಡುವಲ್ಲಿ ಸಂಪೂರ್ಣ ಸರ್ಕಾರ ವಿಫಲವಾಗಿದೆ. ಗೃಹಲಕ್ಷ್ಮಿ ಹಣ ಎಲ್ಲ ಮಹಿಳೆಯರ ಖಾತೆಗೆ ತಲುಪಿಲ್ಲ. ಗೃಹಜ್ಯೋತಿ ಯೋಜನೆ ಮಾಡಿ 200 ಯೂನಿಟ್ ಉಚಿತವೆಂದು ಹೇಳಿ ಇನ್ನೊಂದೆಡೆ ದರ ಹೆಚ್ಚಿಸಿದ್ದಾರೆ. ವಿದ್ಯುತ್ ಸಮರ್ಪಕವಾಗಿ ಕೊಡುತ್ತಿಲ್ಲ. ಮದ್ಯದ ದರವಂತೂ ವಿಪರೀತ ಹೆಚ್ಚಳ ಮಾಡಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಸರ್ಕಾರ ಉರುಳಿಸಲು ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಕಾಂಗ್ರೆಸ್ ಶಾಸಕರೇ ಬೇಸತ್ತು ರಾಜೀನಾಮೆ ನೀಡಿ ಸರ್ಕಾರದ ಪತನಕ್ಕೆ ಕಾರಣರಾಗಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದರೂ ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ. ಇದನ್ನೆಲ್ಲಾ ನೋಡಿದರೆ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ರಾಜ್ಯದಲ್ಲಿ  ಭೀಕರ ಬರಗಾಲವಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿಯೂ ಕಾಂಗ್ರೆಸ್ ಸರ್ಕಾರದಲ್ಲಿ  ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಿಗಮ ಅಧ್ಯಕ್ಷ ಸ್ಥಾನಕ್ಕಾಗಿ ಕಚ್ಚಾಟ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಬೇಸತ್ತು ಪತ್ರ ಬರೆಯುತ್ತಿದ್ದಾರೆ ಎಂದರು.

ಆಡಳಿತ ಪಕ್ಷದಲ್ಲಿರುವ ಡಿಸಿಎಂ  ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸರ್ಕಾರದ ಸಚಿವರೇ ವಿರೋಧ ಮಾಡಿದ್ದಾರೆ. ನ್ಯಾ.ಕಾಂತರಾಜು ವರದಿ ಸರಿಯಿಲ್ಲ. ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ. ಇದು ಅವೈಜ್ಞಾನಿಕ. ಸರಿಯಾದ ರೀತಿ ಸಮೀಕ್ಷೆ ಮಾಡಿ ಅದರ ಆಧಾರದಲ್ಲಿ ವರದಿ ನೀಡಬೇಕು ಎಂದರು.

ಜಮೀರ್ ಅಹಮದ್ ಸಭಾಪತಿ ಹುದ್ದೆಗೆ ಅವರು ಅಪಮಾನ ಮಾಡಿದ್ದಾರೆ. ಜಮೀರ್ ಅಹಮದ್ ಹೇಳಿಕೆ ಖಂಡನೀಯ. ಪಂಚರಾಜ್ಯ ಚುನಾವಣೆಯಲ್ಲಿ  ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ. ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಪೈಪೋಟಿ ನೀಡಿದೆ ಎಂದರು. 

ಕೆ.ಪಿ. ಕಲ್ಲಿಂಗಪ್ಪ, ಪಿ.ಎಸ್. ರಾಜು, ಜಯರುದ್ರೇಶ್, ಬಸವರಾಜ್, ವೆಂಕಟೇಶ್, ಮಂಜುನಾಥ್, ಅಣಜಿ ಬಸವರಾಜ್, ಹನುಮಂತಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!