ಹರಪನಹಳ್ಳಿ, ಡಿ. 7 – ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ 1981ರ ಕಲಂ 37ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ರೂ.3000/- ದಂಡ ಮತ್ತು 1 ವರ್ಷ 6 ತಿಂಗಳಗಳ ಕಾಲ ಸಾದಾ ಕಾರಾಗೃಹ ಶಿಕ್ಷೆಯನ್ನು ಹರಪನಹಳ್ಳಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಆರೋಪಿಗಳಾದ ಹಿರೇಮೇಗಳಗೇರಿ ಗ್ರಾಮದ ಎಂ.ಕೆಂಚವೀರಪ್ಪ, ಸತ್ತೂರು ಎ. ಕೊಂಡಯ್ಯ, ಬೇವಿನಹಳ್ಳಿ ರಾಘು ಪಾಟೀಲ್, ಕಮ್ಮತ್ತಹಳ್ಳಿ ಕೆ. ಪ್ರಕಾಶ್, ಪೋತಲಕಟ್ಟೆ ಡಿ. ರೇವಣಸಿದ್ದಪ್ಪ, ಫಣಿಯಾಪುರ ನಸೀರ್ ಆಹ್ಮದ್, ಗೊಲ್ಲರಹಟ್ಟಿ ಕೆ. ಶಿವಮ್ಮ, ಪೋತಲಕಟ್ಟೆ ನಾಗರಾಜ್ ಪಟೇಲ್, ಬೇವಿನಹಳ್ಳಿ ದೊಡ್ಡ ತಾಂಡಾದ ಹೀರಾನಾಯ್ಕ ಒಟ್ಟು 9 ಪ್ರಕರಣದ 9 ಜನ ಆರೋಪಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಘಟನೆ ಹಿನ್ನೆಲೆ : ಅರಸೀಕೆರೆ ಪೊಲೀಸ್ ಠಾಣೆಯಲ್ಲಿ 2013 ರಂದು ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ 1981 ರ ಕಲಂ. 37ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಅಂತಿಮ ವಾಗಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಗಳನ್ನು ಸಲ್ಲಿಸಿದ ಬಳಿಕ ಸದರಿ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ಆರೋಪಿಗಳ ಪರವಾಗಿ ವಕೀಲರುಗಳು ವಾದವನ್ನು ಮಂಡಿಸಿದರು. ಪಿರ್ಯಾದುದಾರರ ಪರವಾಗಿ ಬಿ. ಕೃಷ್ಣಮೂರ್ತಿ ವಕೀಲರು ವಾದ ಮಂಡಿಸಿದರು. ಪರಸ್ಪರ ವಾದವಿವಾದವನ್ನು ಆಲಿಸಿದ ಹರಪನಹಳ್ಳಿ ಜೆ.ಎಂ.ಎಫ್.ಸಿ.ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ರವರು ಅಂತಿಮವಾಗಿ ಒಟ್ಟು 9 ಪ್ರಕರಣದ 9 ಜನ ಆರೋಪಿಗಳ ವಿರುದ್ದ 1 ವರ್ಷ 6 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ರೂ. 3000/- ಗಳು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.