ದಾವಣಗೆರೆ, ಡಿ. 7- ಶೈಕ್ಷಣಿಕ ಕಾಳಜಿಯೊಂದಿಗೆ ವಿದ್ಯಾರ್ಥಿಗಳಲ್ಲಿ ಜ್ಞಾನದ, ಪರಿಜ್ಞಾನದ ಅರಿವಿದ್ದರೆ ಮಕ್ಕಳ ಮುಂದಿನ ಉತ್ತಮ ಫಲಿತಾಂಶಕ್ಕೆ ನಾಂದಿ. ಶಿಕ್ಷಕ-ಶಿಕ್ಷಕಿಯರ ಜತೆಯಲ್ಲಿ ಪೋಷಕರೂ ಕೈಜೋಡಿಸಬೇಕಾಗಿದೆ ಎಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಅನಂತರಾಜು ಹೇಳಿದರು.
ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಕೆಆರ್ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಕೆಲವು ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ಶಿಕ್ಷಣಕ್ಕೆ ಧಕ್ಕೆಯಾಗುತ್ತಿದೆ. ಎಸ್ಸೆಸ್ಸೆಲ್ಸಿ ಹಂತ ಜೀವನದ ಮತ್ತು ಶಿಕ್ಷಣದ ಒಂದು ತಿರುವ. ಮಕ್ಕಳು ಈ ದಿಕ್ಕಿನಲ್ಲಿ ಇಚ್ಛಾಶಕ್ತಿಯಿಂದ, ಬದ್ಧತೆಯಿಂದ ಸಮಯಪ್ರಜ್ಞೆಯೊಂದಿಗೆ ತೊಡಗಿಸಿಕೊಂಡಾಗ ಮುಂದಿನ ಸಾಧನೆಗಳಿಗೆ ಪೂರಕ ಎಂದರು.
ಶಿಕ್ಷಣ ಸಂಯೋಜಕರಾದ ಡಾ. ಪ್ರತಿಮಾ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಹೊಸ ತಂತ್ರಜ್ಞಾನದ ಭರಾಟೆಯಲ್ಲಿ ಮೊಬೈಲ್ಗಳ ಸಹವಾಸದೊಂದಿಗೆ ಮಕ್ಕಳ ಶೈಕ್ಷಣಿಕ ಕಾಳಜಿಗೆ ಕೊರತೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು.
ಕಾಲೇಜಿನ ಉಪ ಪ್ರಚಾರ್ಯರಾದ ಸಿ. ಉಮೇಶ್ವರ, ಸಿಬಿಸಿ ಸಮಿತಿ ಅಧ್ಯಕ್ಷ ಎಂ.ಬಿ. ಕುಮಾರ್, ಎಸ್ಡಿಎಂಸಿ ಅಧ್ಯಕ್ಷ ರಾಜೇಶಚಾರಿ, ಸಮಾಜ ಸೇವಕ ಶ್ರೀಧರ ನಾಯಕ, ಯುವ ಪ್ರತಿಭಾವಂತ ಯುವ ಶಿಕ್ಷಕಿ ವಿದ್ಯಾಶೆಣೈ ಮತ್ತಿತರರು ಉಪಸ್ಥಿತರಿದ್ಚರು.
ರಾಮಪ್ರಸಾದ ಪೊನ್ನುಸ್ವಾಮಿ ಸ್ವಾಗತಿಸಿದರು. ಎಲ್.ಜಿ. ಲಿಂಗರಾಜಪ್ಪ ನಿರೂಪಿಸಿದರು. ಎಸ್. ಜಯಲಕ್ಷ್ಮಿ ವಂದಿಸಿದರು.