ದಾವಣಗೆರೆ, ಡಿ. 7- ಶ್ರೀ ನಾಮದೇವ ಸಿಂಪಿ ಸಮಾಜ ಹಾಗೂ ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ ನಾಳೆ ದಿನಾಂಕ 8, 9 ಮತ್ತು 10 ರಂದು ಮೂರು ದಿನಗಳ ಕಾಲ ನಗರದ ಎಸ್ಕೆಪಿ ರಸ್ತೆಯಲ್ಲಿನ ಶ್ರೀ ವಿಠಲ್ ಮಂದಿರ ಹಾಗೂ ದೊಡ್ಡಪೇಟೆ ಶ್ರೀ ನಾಮದೇವ ಭಜನಾ ಮಂದಿರದಲ್ಲಿ 98 ನೇ ಶ್ರೀ ಪಾಂಡುರಂಗ ವಿಠಲ ರುಖುಮಾಯಿ ದಿಂಡಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಎಸ್ ವಿಠಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ದಿನಾಂಕ 8 ರಂದು ಬೆಳಿಗ್ಗೆ 5 ರಿಂದ 7 ರವರೆಗೆ ಕಾಕಡಾರತಿ, ಭಜನೆ, ಪಂಚಾಮೃತ ಅಭಿಷೇಕ ನೆರವೇರಲಿದ್ದು, ಸಂಜೆ 4 ಗಂಟೆಗೆ ವಿಠಲ ಮಂದಿರದಿಂದ ಭಜನೆ ಮುಖಾಂ ತರ ನಾಮದೇವ ಭಜನಾ ಮಂದಿರಕ್ಕೆ ಪೋತಿಯನ್ನು ತಂದು ಸ್ಥಾಪಿಸಲಾಗುವದು. ನಂತರ ಅನಂತ ಬೊಂಗಾಳೆ ಅವರಿಂದ ಕೀರ್ತನಾ ಕಾರ್ಯಕ್ರಮವಿದೆ.
ಸಂಜೆ 7.15ಕ್ಕೆ ಅಶೋಕ ಮಾಳೋದೆ ಕುಟುಂಬದಿಂದ 10 ಹಿರಿಯ ಚೇತನರಿಗೆ ಹಾಗೂ 5 ದಂಪತಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ನಂತರ 7.30 ಕ್ಕೆ ಸಮಾಜದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಮುಖ್ಯ ಅತಿಥಿಗಳಾಗಿ ಜಗನ್ನಾಥ್ ನಾಡಿಗೇರ್ ಆಗಮಿಸುವರು. ಸಾಧಕರಾದ ಶ್ರೀನಿವಾಸ್, ಪರಶುರಾಂ ಮಹೇಂದ್ರಕರ್, ಉಮಾ ಮಹೇಂದ್ರಕರ್, ಅವನಿ ಬೊಂಗಾಳೆ ಅವರನ್ನು ಸನ್ಮಾನಿಸಲಾಗುವುದು.ಸಮಾಜದ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅಧ್ಯಕ್ಷತೆ ವಹಿಸಲಿದ್ದಾರೆ.
ನಾಡಿದ್ದು ದಿನಾಂಕ 9 ರ ಶನಿವಾರ ಬೆಳಿಗ್ಗೆ 5 ಕ್ಕೆ ಕಾಕಡರಾತಿ, ಅಭಿಷೇಕ ಹಾಗೂ ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ 9 ಕ್ಕೆ ಶ್ರೀ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ, ನಂತರ ಭಜನೆ, ಪ್ರವಚನ ನೆರವೇರಲಿದೆ. ಸಂಜೆ 5.15 ಕ್ಕೆ ಮಯೂರ ರಥದಲ್ಲಿ ಶ್ರೀ ವಿಠಲ ರುಖುಮಾಯಿ ಉತ್ಸವ ಪ್ರಮುಖ ಬೀದಿಗಳಲ್ಲಿ ಜರುಗಲಿದೆ ಎಂದು ಮಾಹಿತಿ ನೀಡಿದರು.
ದಿನಾಂಕ 10 ರ ಭಾನುವಾರ ಬೆಳಿಗ್ಗೆ 5 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ಕ್ಕೆ ಸ್ವಾಮಿಯ ಉತ್ಸವ ನೆರವೇರಲಿದೆ. ಇದರೊಂದಿಗೆ ದಿಂಡಿ ಉತ್ಸವ ಸಮಾರೋಪಗೊಳ್ಳಲಿದೆ.
ಅಂದು ಉತ್ಸವ ಬೆಳಿಗ್ಗೆ 10 ಕ್ಕೆ ಪಿ.ಬಿ. ರಸ್ತೆಯಲ್ಲಿರುವ ಆರ್.ಹೆಚ್. ಛತ್ರದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 12 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಆಗಮಿಸಲಿದ್ದು, ಸಮಾಜದ ಅಧ್ಯಕ್ಷ ಎಂ.ಎಸ್. ವಿಠಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪದಾಧಿಕಾರಿಗಳಾದ ಕರಿಣ್ ಕುಮಾರ್, ಜ್ಞಾನದೇವ ಬೊಂಗಾಳೆ, ಕೆ.ಜಿ. ಯಲ್ಲಪ್ಪ, ಮನೋಹರ ವಿ. ಬೊಂಗಾಳೆ, ಹೆಚ್.ಕೆ. ಪರಶುರಾಮ್, ಆರ್.ಕೆ. ಆನಂದರಾವ್ ಉಪಸ್ಥಿತರಿದ್ದರು.