7 ಆರೋಪಿಗಳ ಬಂಧನ
ದಾವಣಗೆರೆ, ನ. 7- ನಗರದಲ್ಲಿ ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.
ಜಿ.ಮಲ್ಲಿಕಾರ್ಜುನಪ್ಪ ಬಡಾವಣೆಯ ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವೀಸ್ ರಸ್ತೆಯಿಂದ ಮಯೂರ ಗ್ಲೋಬಲ್ ಶಾಲೆ ಕಡೆ ಹೋಗುವ ರಸ್ತೆಯಲ್ಲಿ ಮಾದಕ ವಸ್ತು ಸೇವಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಇವರಿಂದ ಮಾದಕ ವಸ್ತು, 1 ಕಾರು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಈ ಆರೋಪಿಗಳಿಗೆ ಮಾದಕ ವಸ್ತು ಮಾರಾಟ ಮಾಡಿದ್ದ ಒಬ್ಬ ಆರೋಪಿಯನ್ನು ಹಿಡಿದು ಒಂದು ಮೊಬೈಲ್ ವಶಪಡಿಸಿಕೊಂಡು, ಆತ ನೀಡಿದ ಮಾಹಿತಿ ಮೇರೆಗೆ ಡಿ.3ರಂದು ಬೆಂಗಳೂರು ನಗರದ ಬಸವೇಶ್ವರ ಬಡಾವಣೆ 2ನೇ ಹಂತ 4ನೇ ಮೇನ್ 5ನೇ ಕ್ರಾಸ್ ನಲ್ಲಿರುವ ಮನೆಯ ಮೇಲೆ ಶೋಧನಾ ವಾರೆಂಟ್ ಪಡೆದು ದಾಳಿ ಮಾಡಿ ಮನೆಯಲ್ಲಿದ್ದ ಇಬ್ಬರು ಆರೋಪಿತರನ್ನು ವಶಕ್ಕೆ ಪಡೆದು, ಮನೆಯಲ್ಲಿದ್ದ ಎಂಡಿಎಂಎ ಮಾದಕ ವಸ್ತು ಮತ್ತು ಮೇಲ್ನೋಟಕ್ಕೆ ಹುಲಿಯ ಉಗುರಿನಂತೆ ಕಾಣುವ 6 ಹುಲಿ ಉಗುರುಗಳನ್ನು ಹಾಗೂ 2 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಲಾಜಿ ನಗರದ ಅಶೋಕ್ ಕುಮಾರ್ ಎಸ್. (27), ಆರ್‌ಎಂಸಿ ಲಿಂಕ್ ರಸ್ತೆ ಪಾರ್ಕ್ ಹಿಂಭಾಗದ ವಾಸಿ ರಮೇಶ್ ಕುಮಾರ್ ಗಾಂಸಿ (39), ಪುಟ್ಟಿ ವ್ಯಾಪಾರಿ ಎಂ.ಆರ್. ಲೋಕೇಶ್ (40), ವಿನೋಬನಗರದ ಕಾರು ಚಾಲಕ ಕಾರ್ತಿಕ್ (32) ನಿಜಲಿಂಗಪ್ಪ ಬಡಾವಣೆಯ ಕಾರ್ಪೆಂಟರ್ ಕೆಲಸ ಮಾಡುವ ರಾಮ್ ರತನ್ (34) ಬಸವೇಶ್ವರ ಬಡಾವಣೆಯ ಸ್ಟೇಲ್ ರಿಲೀಂಗ್ ಕೆಲಸ ಮಾಡುವ ಸುನೀಲ್ ಕುಮಾರ್ (28) ಬೆಂಗಳೂರು ಕೂಡಿಗೆಹಳ್ಳಿಯಲ್ಲಿ ಸ್ಟೀಲ್ ಸ್ಕ್ರಾಪ್ ವ್ಯಾಪಾರಿ ಅಶೋಕ್ ಕುಮಾರ್ (23) ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಒಟ್ಟಾರೆ ಈ ಪ್ರಕರಣದಲ್ಲಿ 3.20 ಲಕ್ಷ ರೂ. ಮೌಲ್ಯದ 49 ಗ್ರಾಂ ಮಾದಕ ವಸ್ತು, 6 ಹುಲಿ ಉಗುರು, 4 ಮೊಬೈಲ್, 1 ಕಾರು ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.