ಹರಪನಹಳ್ಳಿ, ಡಿ.6- ಬರಗಾಲ ಹಿನ್ನೆಲೆಯಲ್ಲಿ ಫೈನಾನ್ಸ್ ಮಾಲೀಕರು ಟ್ರ್ಯಾಕ್ಟರ್ ಮಾಲೀಕರ ಮೇಲೆ ದೌರ್ಜನ್ಯ ನಡೆಸಿ ಟ್ರ್ಯಾಕ್ಟರ್ ಸೀಜ್ ಮಾಡುವ ಕ್ರಮ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ತಾಲ್ಲೂಕು ಅಧ್ಯಕ್ಷ (ಹುಚ್ವನ ಹಳ್ಳಿ ಮಂಜುನಾಥ ಬಣ)ದ ದ್ಯಾಮಜ್ಜಿ ಹನುಮಂತಪ್ಪ ಒತ್ತಾಯಿಸಿದರು.
ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು, ಫೈನಾನ್ಸ್ ಕಂಪನಿಗಳು ತಮ್ಮ ಪ್ರತಿನಿಧಿಗಳ ಮೂಲಕ ಕಂತುಗಳನ್ನು ಕಟ್ಟುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ರಾಜ್ಯದಲ್ಲಿ ಬರಗಾಲವಿದೆ, ಕಂತು ಕಟ್ಟುವ ಸಂಕಷ್ಟದಲ್ಲಿ ರೈತ ತೊಳಲಾಡುತ್ತಿದ್ದಾನೆ, ವ್ಯಾಪಾರ, ವಹಿವಾಟುಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಸಹ ಮಾನವೀಯತೆಯನ್ನು ಮರೆತು ಸಾಲ ಪಡೆದ ರೈತರುಗಳಿಗೆ ಕಂತುದಾರರಿಗೆ ಕಂತುಗಳನ್ನು ಕಟ್ಟುವಂತೆ ಪೀಡಿಸುತ್ತಿದ್ದಾರೆ. ಹಾಗಾಗಿ ಈ ರೀತಿ ಸಾಲಗಾರರಿಗೆ ಕಂತುಗಳನ್ನು ಕಟ್ಟುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಫೈನಾನ್ಸ್ ಮಾಲೀಕರು ಎರಡು-ಮೂರು ಕಂತುಗಳನ್ನು ಕಟ್ಟದೇ ಇರುವ ಗಾಡಿಗಳನ್ನು ದೌರ್ಜನ್ಯದಿಂದ ಸೀಜ್ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಇದೇ ರೀತಿ ವಾಹನಗಳನ್ನು ಸೀಜ್ ಮಾಡುವುದಕ್ಕೆ ಮುಂದಾದರೆ ಕಾನೂನು ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿ ಕೊಡಲು ತಹಶೀಲ್ದಾರರು ಅಂತಹ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಮಧ್ಯಪ್ರವೇಶಕ್ಕೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಕಾಳಪ್ಪ ರಮೇಶ್, ಹುಲಿಕಟ್ಟಿ ಪಕ್ಕೀರಪ್ಪ, ಗುಂಡಗತ್ತಿ ಸೋಮಪ್ಪ, ತೌಡೂರು ಸಿದ್ದಪ್ಪ, ಬಾಲೇನಹಳ್ಳಿ ಜಗದಪ್ಪ ಸೇರಿದಂತೆ ಇತರೆ ರೈತ ಮುಖಂಡರು ಉಪಸ್ಥಿತರಿದ್ದರು.