ಪಿಂಚಣಿ ಯೋಜನೆ ಜಾರಿಗೊಳಿಸಿ
ದೇಶದ ಜನರಿಗೆ ಆಹಾರ ಉತ್ಪಾದಿಸುವ 60 ವರ್ಷ ದಾಟಿದ ಅನ್ನದಾತನಿಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ದಾವಣಗೆರೆ, ಡಿ. 6- ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ದ ಸಂಯುಕ್ತಾಶ್ರಯದಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ಇದೇ ದಿನಾಂಕ 23 ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನಲ್ಲಿ ರೈತರ ಮಹಾ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ಹಾಗೂ ರಾಷ್ಟ್ರೀಯ ರೈತ ಮುಖಂಡರ ಸಮ್ಮುಖದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಅತೀವೃಷ್ಟಿ, ಪ್ರವಾಹ ಹಾನಿ, ಮಳೆ ಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮಿಗಳ 12 ಲಕ್ಷ ಕೋಟಿ ಸಾಲ ಮಾಡಿರುವ ಸರ್ಕಾರ ರೈತರ ಸಾಲವನ್ನು ಯಾವುದೇ ಕಾರಣ ಹೇಳದೇ ಮನ್ನಾ ಮಾಡಲೇಬೇಕಾಗಿದೆ ಎಂಬಿತರೇ ಬೇಡಿಕೆಗಳ ಮನವಿಯನ್ನು ಇದೇ ದಿನಾಂಕ 23 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಭತ್ತ, ಕಬ್ಬು ಉತ್ಪಾದನೆ ಶೇ. 50 ರಷ್ಟು ಕಡಿಮೆಯಾಗಿರುವ ಕಾರಣ, ಭತ್ತ ಮಾರಾಟ ಮಾಡದೇ ಉಗ್ರಾಣಗಳಲ್ಲಿ ದಾಸ್ತಾನು ಮಾಡಿ ದಾಸ್ತಾನು ಚೀಟಿ ನೀಡಿದರೆ ಬ್ಯಾಂಕುಗಳಲ್ಲಿ ಶೇ. 75 ರಷ್ಟು ಮುಂಗಡ ಸಾಲ ಕೊಡುತ್ತೇವೆ. ಅದರ ಉಪ ಯೋಗ ಪಡೆದು ಬೆಲೆಯೇರಿಕೆ ಆದಾಗ ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು.
ಎಲ್ಲಾ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಕನಿಷ್ಠ ಬೆಂಬಲ ನಿಗದಿಯಾಗಬೇಕು. ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೇಂದ್ರ ಸರ್ಕಾರ ಕೂಡಲೇ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಬಿಡುಗಡೆ ಮಾಡಬೇಕು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಎಫ್‌ಆರ್‌ಪಿಗೆ ಹೆಚ್ಚುವರಿಯಾಗಿ 300 ರಿಂದ 400 ಕಾರ್ಖಾನೆಗಳಿಗೆ ಸ್ವಯಂ ಘೋಷಣೆ ಮಾಡಿ ಕೊಡುತ್ತಿದ್ದಾರೆ. ಈ ಭಾಗದ ಕಾರ್ಖಾನೆ ರೈತರಿಗೆ ನ್ಯಾಯಯುತ ದರ ನೀಡುವಲ್ಲಿ ವಂಚಿಸಲಾಗುತ್ತಿದೆ ಎಂದರು.
ಕಬ್ಬು ಉತ್ಪಾದನೆ ಶೇ. 50 ರಷ್ಟು ಕಡಿಮೆಯಾಗಿದೆ. ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿ ಮಾಡುತ್ತಿವೆ. ಈ ಜಿಲ್ಲೆಯ ಕಾರ್ಖಾನೆ ಎಫ್‌ಆರ್‌ಪಿ ದರ ಮಾತ್ರ ನೀಡುತ್ತಿರುವುದು ಅನ್ಯಾಯ. ಕೂಡಲೇ ಕನಿಷ್ಠ 300 ಹೆಚ್ಚುವರಿ ನೀಡಬೇಕು. ಇಲ್ಲದಿದ್ದರೆ ರೈತರು ಹೆಚ್ಚು ದರ ನೀಡುವ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುತ್ತಾರೆಂದು ಎಚ್ಚರಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ನೀಡು ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ಹಗಲು ವೇಳೆ ನಿರಂತರ 10 ತಾಸು ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಅಂಜಿನಪ್ಪ ಪೂಜಾರ್, ಮುರುಗೇಂದ್ರಯ್ಯ, ಮಾಗಡಿ ಅಜ್ಜಪ್ಪ, ದೇವರಾಜ್, ಅಶೋಕ್, ತಿರುಮಲೇಶ್, ಪ್ರಾತಪ್, ಐಗೂರು ಶಿವಮೂರ್ತಿ, ಹೆಬ್ಬಾಳು ರಾಜಯೋಗಿ ಮತ್ತಿತರರಿದ್ದರು.