ಮಲೇಬೆನ್ನೂರಿನಲ್ಲಿ ಮತ್ತೆ ನಾಲ್ವರನ್ನು ಗಾಯಗೊಳಿಸಿದ ಮುಷ್ಯ

ಮಲೇಬೆನ್ನೂರಿನಲ್ಲಿ ಮತ್ತೆ ನಾಲ್ವರನ್ನು ಗಾಯಗೊಳಿಸಿದ ಮುಷ್ಯ

ಮಂಗಳವಾರ ಮುಷ್ಯ ಸೆರೆ ಹಿಡಿಯುವ ಕಾರ್ಯಾಚರಣೆ ತೀವ್ರ : ಪುರಸಭೆ ಸಿಓ ಸುರೇಶ್

ಮಲೇಬೆನ್ನೂರು, ಡಿ.4- ಪಟ್ಟಣದಲ್ಲಿ ಸೋಮವಾರ ನಾಲ್ವರ ಮೇಲೆ ಮುಷ್ಯ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜನರನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡಿದೆ.

ಬೆಳಿಗ್ಗೆ ನಿಟ್ಟೂರು ರಸ್ತೆಯಲ್ಲಿ ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಮುಷ್ಯವು, ಸಂಜೆ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗ ಕನಕದಾಸ ರಸ್ತೆಯಲ್ಲಿ ಕಡ್ಲೆಗೊಂದಿ ಬಸವರಾಜ್, ಡ್ರೈವರ್ ರಾಜಣ್ಣ ಮತ್ತು ಪೂಜಾರ್ ಗಂಗೇನಳ್ಳ್ಯೆಪ್ಪರ ಮೊಮ್ಮಗ ಹನುಮಂತ ಎಂಬುವವರ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡಿ ಕೈಗಳನ್ನು ಕಚ್ಚಿ ಗಾಯಗೊಳಿಸಿದೆ.

ಭಾನುವಾರ ಸಂಜೆ ಮತ್ತು ಸೋಮವಾರ ಬೆಳಿಗ್ಗೆ ಮುಷ್ಯವು ಜನರ ಮೇಲೆ ದಾಳಿ ಮಾಡಿದ ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರು, ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕರೆಸಿಕೊಂಡು ನಿಟ್ಟೂರು ರಸ್ತೆಯಲ್ಲಿ ಬೋನ್ ಇಟ್ಟು ಮುಷ್ಯವನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಮುಷ್ಯ ಆ ಜಾಗದಲ್ಲಿ ಕನಕದಾಸ ರಸ್ತೆಗೆ ಬಂದು ಮೂವರಿಗೆ ದಾಳಿ ಮಾಡಿದೆ. ಈ ವಿಷಯ ತಿಳಿದು ಬೋನ್ ಅನ್ನು ದಾಳಿ ಮಾಡಿದ ಸ್ಥಳಕ್ಕೆ ತಂದಿಟ್ಟು ಮುಷ್ಯವನ್ನು ರಾತ್ರಿವರೆಗೂ ಕಾದು ಹೋಗಿದ್ದಾರೆ. ಮಂಗಳವಾರ ಬೆಳಿಗ್ಗೆಯಿಂದ ಮುಷ್ಯವನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತೀವ್ರಗೊಳಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ `ಜನತಾವಾಣಿ’ಗೆ ತಿಳಿಸಿದ್ದಾರೆ. ಮುಷ್ಯವು ದಾಳಿ ವೇಳೆ ಮನುಷ್ಯರನ್ನು ತೀವ್ರವಾಗಿ ಗಾಯಗೊಳಿಸುತ್ತಿದ್ದು, ಇದನ್ನು ನೋಡಿದ ನಾವು ಗಾಬರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಾಯಾಳುಗೆ ಚಿಕಿತ್ಸೆ ನೀಡಿದ ಹಿರಿಯ ವೈದ್ಯ ಡಾ. ಬಿ.ಚಂದ್ರಶೇಖರ್ ತಿಳಿಸಿದರು.

ಆ ಮುಷ್ಯವನ್ನು ಕೂಡಲೇ ಸೆರೆ ಹಿಡಿಯದಿದ್ದರೆ ಇನ್ನಷ್ಟು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಡಾ. ಬಿ.ಚಂದ್ರಶೇಖರ್ ಮನವಿ ಮಾಡಿದ್ದಾರೆ.

error: Content is protected !!