ಹರಪನಹಳ್ಳಿ : ಉಜ್ಜಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ
ಹರಪನಹಳ್ಳಿ, ಡಿ.3- ಜನರಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ಸತ್ಯ ಮತ್ತು ಅಸತ್ಯಗಳ ನಡುವಿನ ವ್ಯತ್ಯಾಸಗಳನ್ನು ಹಾಗೂ ಒಳಿತು ಮತ್ತು ಕೆಡಕುಗಳ ನಡುವಿನ ಭಿನ್ನತೆಯನ್ನು ತಿಳಿಸುವ ಶಕ್ತಿಕೇಂದ್ರಗಳು ಮಠಗಳಾಗಿವೆ ಎಂದು ಉಜ್ಜಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ದುಗ್ಗಾವತಿ ಗ್ರಾಮದ ಹಿರೇಮಠದ ಧರ್ಮಾಧಿಕಾರಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು ಮಠ, ಮಾನ್ಯಗಳು ಜನರ ಜೀವನ ಮಟ್ಟವನ್ನು ಧಾರ್ಮಿಕವಾಗಿ, ಆರ್ಥಿಕವಾಗಿ, ಅಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸುಧಾರಿಸುವ ಕ್ಷೇತ್ರಗಳಾಗಿವೆ ಎಂದರು.
ಯಾವುದೇ ಮಠ, ಪೀಠಗಳು ಭಕ್ತರ ಹೊರತಾಗಿಲ್ಲ. ಭಕ್ತರಿದ್ದರೆ ಮಠ ಇದನ್ನು ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಗುರು ವಾಸ ಮಾಡುವ ಕ್ಷೇತ್ರ ಮಠವಲ್ಲ, ಬೋಧನೆ ಮಾಡುವ ಗುರು, ಕೇಳುವ ಶಿಷ್ಯರು ಇದ್ದರೆ ಮಾತ್ರ ಮಠವಾಗುತ್ತೆ. ಹಾಗಾಗಿ ಭಕ್ತರೇ ಮಠಕ್ಕೆ ನಿಜವಾದ ಆಸ್ತಿ ಎಂದ ಅವರು, ಈ ಭಾಗದಲ್ಲಿ ಶ್ರೀಶೈಲ ಪೀಠದ ಶಾಖಾ ಹಿರೇಮಠದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಭಕ್ತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಭಕ್ತರು ಶ್ರೀ ಮಠದ ಶ್ರೆಯೋಭಿವೃದ್ಧಿಗೆ ಶ್ರಮಿಸಿ ಎಂದು ಕರೆ ನೀಡಿದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾ ಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ನಲ್ಲಿ ಅಡಗಿರುವ ಅಂಧಕಾರವನ್ನು ಕಳೆಯಲು ಗುರುಗಳ ಮಾರ್ಗದರ್ಶನದ ಅವಶ್ಯಕತೆ ಇದೆ. ಹಾಗಾಗಿ ಅನಕ್ಷರತೆಯಿಂದ ಹೊರಬಂದು ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಅವರು ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದೇಶ್ವರ ಶ್ರೀಗಳು, ದುಗ್ಗಾವತಿ ಹಿರೇಮಠದ ಶ್ರೀ ವೀರಭದ್ರೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರೇಕುರುವತ್ತಿ ಶ್ರೀ ಸಿದ್ದಿ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಅಡವಿಹಳ್ಳಿ ಮಠದ ಶ್ರೀ ವೀರ ಗಂಗಾಧರ ಸ್ವಾಮೀಜಿ ಉಪಸ್ಥಿತರಿದ್ದರು.