ಬಾಲ್ಯದಲ್ಲಿಯೇ ಮೌಲ್ಯಗುಣಗಳನ್ನು ಬೆಳೆಸಲು ಡಾ.ವಾಮದೇವಪ್ಪ ಸಲಹೆ
ದಾವಣಗೆರೆ, ನ. 3- ಹಿಂದೆಂದಿಗಿಂತಲೂ ಇಂದು ಸಾಂಪ್ರದಾಯಿಕ ಮೌಲ್ಯಗಳ ಅಧಃಪತನವಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಮೌಲ್ಯ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಸಿರಿಗೆರೆ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿಗಳೂ, ಶಿಕ್ಷಣ ತಜ್ಞರೂ ಆದ ಡಾ.ವಾಮದೇವಪ್ಪ ಹೆಚ್.ವಿ. ಹೇಳಿದರು.
ಇಲ್ಲಿನ ವಿನೋಬಗನಗರ ಒಂದನೇ ಮುಖ್ಯರಸ್ತೆಯಲ್ಲಿನ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ಆವರಣದ ಶ್ರೀಮತಿ ಸುರೇಖ ವೀರಣ್ಣ ಚಿಗಟೇರಿ ಕಲಾ ಮಂದಿರದಲ್ಲಿ ನಡೆಯುತ್ತಿರುವ ಸಂಸ್ಥೆಯ 60 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದ ಮೂರನೇ ದಿನ ಬೆಳಿಗ್ಗೆ `ಇಂದಿನ ಶಿಕ್ಷಣ ವ್ಯವಸ್ಥೆ-ಮೌಲ್ಯ ಪ್ರತಿಪಾದನೆ’ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಕೊರತೆಯಿಂದಾಗಿ ಮಕ್ಕಳು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹಿಂಸಾ ಪ್ರವೃತ್ತಿ, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮಕ್ಕಳು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರಸ್ತುತ ಕಾಲ ಜ್ಞಾನದ ಅರಿವನ್ನೇ ಮರೆತಿರುತ್ತಾರೆ. ಇದಕ್ಕೆ ಪೋಷಕರು ಹಾಗೂ ಶಿಕ್ಷಕರಿಂದ ಸೂಕ್ತ ಮಾರ್ದದರ್ಶನ ಸಿಗದಿರುವುದೇ ಕಾರಣ ಎಂದು ಅಭಿಪ್ರಾಯಿಸಿದರು.
ಶಿಸ್ತು, ಪ್ರಾಮಾಣಇಕತೆ, ತ್ಯಾಗ ಮನೋಭಾವ, ತಾಳ್ಮೆ, ಹೆತ್ತವರು ಹಾಗೂ ಹಿರಿಯರಿಗೆ ಗೌರವ ಕೊಡುವ ಮನೋಭಾವವನ್ನು ಕಲಿಸಬೇಕು. ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹಾಗೂ ಅದರ ಮೌಲ್ಯಗಳ ಬಗ್ಗೆ ಕಲಿಸಬೇಕು. ವೈಕ್ತಿಕ ಸಾಮಾಜಿಕ ನೈರ್ಮಲ್ಯ ಕಾಪಾಡಿಕೊಳ್ಳುವ ಕುರಿತು ತಿಳಿಸಬೇಕು. ಪರಿಸರ ಮಾಲಿನ್ಯದಿಂದ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಸಬೇಕು. ಗಿಡ ಮರ ಪೋಷಿಸುವ ಮನೋಭಾವ ಬೆಳೆಸಬೇಕು ಎಂದು ಹೇಳಿದರು.
ಕೆಟ್ಟದ್ದರ ಮೇಲೆಯೇ ಗಮನ ಹೆಚ್ಚು: ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಜಗತ್ತಿನಲ್ಲಿ ನಡೆಯುವ ಕೆಟ್ಟದ್ದನ್ನು ಒಂದು ನಿಮಿಷ ಮಾತ್ರ ತೋರಿಸಬಹುದು. ಉಳಿದ ಸಮಯ ಒಳ್ಳೆಯದನ್ನು ತೋರಿಸಬಹುದು. ಆದರೆ ನಮ್ಮ ಗಮನವೆಲ್ಲಾ ಹೆಚ್ಚಾಗಿ ಕೆಟ್ಟದ್ದರ ಕಡೆಯೇ ಇರುತ್ತದೆ. ಕೆಟ್ಟದ್ದರ ಬದಲು ನಾವೇನು ಒಳಿತು ಮಾಡಬಹುದು ಎಂದು ಚಿಂತಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.
`ಶಿಕ್ಷಣ’ ಪದದಲ್ಲಿ ಶಿಕ್ಷೆ ಇದೆ. ಇದರಿಂದಾಗಿ ಶಿಕ್ಷಣ ಪದ ಬಳಕೆಯೇ ಸರಿಯಲ್ಲ ಎಂದು ಅಭಿಪ್ರಾಯಿಸಿದ ಅವರು, ಕಲಿಕೆ ಅಥವಾ ವಿಧ್ಯಾಭ್ಯಾಸ ಪದ ಬಳಕೆ ಸೂಕ್ತ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ವಿಷಯಗಳನ್ನು ತುರುಕಲಾಗುತ್ತಿದೆ. ಅದರ ಬದಲಾಗಿ ಆಲೋಚಿಸುವ ಬಗೆ ಕಲಿಸಬೇಕು. ಶಿಕ್ಷಣವನ್ನು `ಸ್ಪರ್ಧೆ’ಯ ರೀತಿ ನೋಡದೆ `ಸಹಕಾರ’ದ ರೀತಿ ಕಲಿಸಿದರೆ ಮಕ್ಕಳು ಉತ್ತಮ ಭವಿಷ್ಯ ಕಾಣಲು ಸಾಧ್ಯವಿದೆ. ಭವಿಷ್ಯದ ಬಗ್ಗೆ ಚಿಂತಿಸುವ ಪರಿಕಲ್ಪನೆಯ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಹಿರಿಯ ವೈದ್ಯ ಡಾ. ಶಿವಕುಮಾರ್ ಹೆಚ್.ಬಿ., ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಹಿರಿಯ ವರ್ತಕ ಉಮಾಪತಯ್ಯ, ಕೆ.ವಿ. ಸುಜಾತ ಮಾತನಾಡಿದರು.
ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಸವರಾಜ ಬೆಳಗಾವಿ ಅಧ್ಯಕ್ಷತೆ ವಹಿಸಿದ್ದರು. ಜೆ.ವಿ.ಹೆಚ್.ಎಸ್. ಮುಖ್ಯ ಶಿಕ್ಷಕ ಹೆೆಚ್.ನಿಂಗಪ್ಪ ಸ್ವಾಗತಿಸಿದರು. ಸಹ ಶಿಕ್ಷಕ ರಂಗನಾಥ್ ನಿರೂಪಿಸಿದರು. ವಿ.ಗಣೇಶ್ ವಂದಿಸಿದರು. ಜೆ.ವಿ.ಸಿ.ಹೆಚ್.ಎಸ್. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಹೆಚ್.ನಿಂಗಪ್ಪ ಸ್ವಾಗತಿಸಿದರು.