ದಾವಣಗೆರೆ, ಡಿ. 3 – ತಾಲ್ಲೂಕಿನ ಸುಲ್ತಾನಿಪುರದಿಂದ ಭಾವಿಹಾಳ್ ಗ್ರಾಮದವರಿಗೆ ರಸ್ತೆ ಕಾಮಗಾರಿಗೆ 8 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚಿನ್ನಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಿತಿ ಕೇಂದ್ರದಿಂದ 22 ಲಕ್ಷ ರೂ. ವೆಚ್ಚದಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ತಾಲ್ಲೂಕಿನ ಸುಲ್ತಾನಿಪುರ – ಗಂಗನಕಟ್ಟೆ – ಚಿನ್ನಸಮುದ್ರ – ನರಗನಹಳ್ಳಿ – ಹೊನ್ನಾಯಕನಹಳ್ಳಿ – ಭಾವಿಹಾಳ್ ಗ್ರಾಮಗಳ ಸಂಪರ್ಕ ಕಲ್ಪಿಸುವ ಶಾಶ್ವತ ರಸ್ತೆ ಕಾಮಗಾರಿಗೆ ಈ ಭಾಗದ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಇತ್ತು.
ಈಗ ರಾಜ್ಯ ಸರ್ಕಾರ ಈ ಭಾಗದ ರಸ್ತೆ ಕಾಮಗಾರಿಗೆ ಅನುದಾನ ನೀಡುತ್ತಿದ್ದು, ಹಣಕಾಸು ಇಲಾಖೆಯಿಂದ ಅನುಮೋದನೆ ನೀಡಿದ ಕೂಡಲೇ ಟೆಂಡರ್ ಕರೆದು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನೇರ್ಲಿಗೆ ಗ್ರಾಮ
ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಬಾಯಿ,
ಸದಸ್ಯ ರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರಪ್ಪ, ಎಂಜಿನಿಯರ್ ಶಿವಕುಮಾರ್, ಮುಖಂಡರಾದ ಮಂಜಾ ನಾಯ್ಕ್, ಶೇಖರ್ ನಾಯ್ಕ್,
ಸುರೇಶ್ ನಾಯ್ಕ್, ರೇವಣಸಿದ್ದಪ್ಪ ಸೇರಿದಂತೆ ಇನ್ನಿತರರು ಇದ್ದರು.