ದಾವಣಗೆರೆ, ಡಿ. 3 – ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ದೆಹಲಿ ಚಲೋಗೆ ಜಿಲ್ಲಾ ರಾಷ್ಟ್ರೀಯ ಸಂಘರ್ಷ ಸಮಿತಿ ಇ.ಪಿ.ಎಸ್. 95 ನಿವೃತ್ತ ಪಿಂಚಣಿದಾರರ ಸಂಘದ ವತಿಯಿಂದ ದಾವಣಗೆರೆ ಜಿಲ್ಲೆಯಿಂದ 30 ಜನ ಇ.ಪಿ.ಎಸ್. 95 ಪಿಂಚಣಿದಾರರು ಹೊರಟಿದ್ದಾರೆ.
ಮಾಸಿಕ 7500 ರೂ. ಜೊತೆಗೆ ತುಟ್ಟಿ ಭತ್ಯೆ, ವಿಧವೆಯರಿಗೆ ಪೂರ್ಣ ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ಇ.ಪಿ.ಎಫ್.ನಿಂದ ವಂಚಿತರಾದವರಿಗೆ ಮಾಸಿಕ 5000 ರೂ. ಪಿಂಚಣಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಷ್ಟ್ರೀಯ ಸಂಘರ್ಷ ಸಮಿತಿಯಿಂದ ಇದೇ ದಿನಾಂಕ 7ರಂದು ದೆಹಲಿಯಲ್ಲಿ `ದೆಹಲಿ ಚಲೋ’ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಳೆ ದಿನಾಂಕ 4ರಂದು ರೈಲಿನಲ್ಲಿ ಪ್ರಯಾಣ ಮಾಡಿ ದೆಹಲಿ ತಲುಪಿ, ನಿಗದಿಪಡಿಸಿದ್ದ ದಿನಾಂಕದಂದು ಚಳುವಳಿ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 30 ಜನ ಇ.ಪಿ.ಎಸ್. 95 ಪಿಂಚಣಿದಾರರು ಭಾಗವಹಿಸಲಿದ್ದಾರೆ.
ಸಂಘಟನೆಯ ರಾಷ್ಟ್ರ ಮತ್ತು ರಾಜ್ಯ ನಾಯಕರುಗಳ ಸಮ್ಮುಖದಲ್ಲಿ ದೆಹಲಿಯ ರಾಮಲೀಲಾ ಮೈದಾನದಿಂದ ಸಂಸತ್ ಭವನದವರೆಗೆ ಪ್ರತಿಭಟನೆ ಚಳವಳಿ ಇದೆ. ನಂತರ ಇದೇ ದಿನಾಂಕ 8 ರಂದು ಇಡೀ ರಾಷ್ಟ್ರಾದ್ಯಂತ ಎಲ್ಲಾ ಪಿಂಚಣಿದಾರರಿಂದ ಉಪವಾಸ ಸತ್ಯಾಗ್ರಹ ಮತ್ತು ದಿನಾಂಕ 9 ರಿಂದ 24 ರವರೆಗೆ ಪ್ರತಿ ದಿನ ಒಂದೊಂದು ರಾಜ್ಯದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಕೆ.ಎಂ. ಮರುಳುಸಿದ್ಧಯ್ಯ, ಸಂಯೋಜಕ ಎಂ. ಶಾಂತಪ್ಪ, ಕಾರ್ಯಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಮಲ್ಲಿಕಾರ್ಜುನ ತಂಗಡಗಿ, ಖಜಾಂಚಿ ದತ್ತಪ್ಪ ಶೆಟ್ಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.