ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲ ಯದ ವಿದ್ಯಾನಗರ ಶಾಖಾ ಕೇಂದ್ರದ ವತಿಯಿಂದ ಸುದೀರ್ಘ 30 ದಿನಗಳ `ಶರಣರು ಕಂಡ ಶಿವ’ ಪ್ರವಚನ ಮಾಲೆ ಕಾರ್ಯಕ್ರಮವನ್ನು ಇಂದಿನಿಂದ ಇದೇ ದಿನಾಂಕ 30 ರವರೆಗೆ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾನಗರ ಶಾಖಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದ ನಿರ್ದೇಶಕರೂ, ಅಧ್ಯಾತ್ಮಿಕ ಮಾಸ ಪತ್ರಿಕೆ `ವಿಶ್ವ ನವ ನಿರ್ಮಾಣ’ದ ಸಂಪಾದಕರೂ, ಬಾಲ ಬ್ರಹ್ಮಚಾರಿಗಳೂ, 84 ವರ್ಷದ ಮಹಾನ್ ತಪಸ್ವಿಗಳೂ ಆದ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋುಷಿಗಳವರು ಈ ಪ್ರವಚನವನ್ನು ನಡೆಸಿಕೊಡಲಿದ್ದಾರೆ.
ಇಂದಿನಿಂದ ಇದೇ ದಿನಾಂಕ 30ರವರೆಗೆ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ಒಂದು ಗಂಟೆ ಕಾಲ ಪ್ರವಚನ ನಡೆಯಲಿದೆ ಎಂದು ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ತಿಳಿಸಿದ್ದಾರೆ.
ಸಾರ್ವಜನಿಕರು ಪ್ರತಿದಿನವೂ ಪ್ರವಚನದಲ್ಲಿ ಭಾಗವಹಿಸುವುದರ ಮೂಲಕ ಪರಮಾತ್ಮನ ಸಂದೇಶವನ್ನು ಅರಿತುಕೊಂಡು ಪ್ರತಿಯೊಬ್ಬರೂ ಸನ್ಮಾರ್ಗ ದಲ್ಲಿ ಮುನ್ನಡೆಯುವಂತೆ ಗೀತಾಜಿ ಕೇಳಿಕೊಂಡರು.
ಉದ್ಘಾಟನಾ ಸಮಾರಂಭ : ಇಂದು ಸಂಜೆ 6 ಗಂಟೆಗೆ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ `ಶರಣರು ಕಂಡ ಶಿವ’ ಪ್ರವಚನ ಮಾಲಿಕೆಯ ಉದ್ಘಾಟನಾ ಸಮಾರಂಭ ಆಯೋಜನೆಗೊಂಡಿದೆ.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಪ್ರಧಾನ ಕೇಂದ್ರದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಉಪವಿಭಾಗಾಧಿಕಾರಿ ಶ್ರೀಮತಿ ಎನ್.ದುರ್ಗಾಶ್ರೀ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು, ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಕಟ್ಟಡದ ಭೂ ದಾನಿ ಶ್ರೀಮತಿ ಲಕ್ಷ್ಮಮ್ಮ ದ್ಯಾಮಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.