ನಾಡಿದ್ದು ಸುವರ್ಣ ಸೌಧಕ್ಕೆ ಮುತ್ತಿಗೆ

ನಾಡಿದ್ದು ಸುವರ್ಣ ಸೌಧಕ್ಕೆ ಮುತ್ತಿಗೆ

ದಾವಣಗೆರೆ ತಾಲ್ಲೂಕಿಗೆ ನೂತನ ಅಧ್ಯಕ್ಷ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಾವಣಗೆರೆ ತಾಲ್ಲೂಕು ಅಧ್ಯಕ್ಷರನ್ನಾಗಿ ಮಂಡಲೂರು ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಾಧ್ಯಕ್ಷರನ್ನಾಗಿ ಮಲ್ಲಶೆಟ್ಟಿಹಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಆಂಜನೇಯ ಕಾಟನ್‌ ಮಿಲ್‌ ಶ್ರೀನಿವಾಸ್ ಅವರನ್ನು ಆಯ್ಕೆ  ಮಾಡಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ದಾವಣಗೆರೆ, ಡಿ.1- ಕೃಷಿ ಕಾಯ್ದೆ ವಾಪಾಸ್, ಎಂಎಸ್‌ಪಿ ಬೆಲೆಗೆ ಶಾಸನಬದ್ಧ ಕಾಯ್ದೆ ಜಾರಿ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಇದೇ ದಿನಾಂಕ 4ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ರಚನೆಯಾಗಿ ಆರು ತಿಂಗಳು ಸಮೀಪಿಸಿದರೂ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆ ವಾಪಾಸ್ ಪಡೆಯುವಲ್ಲಿ ಸಿದ್ಧರಾಮಯ್ಯ ಜಾಣತನದ ಕಳ್ಳಾಟ, ನಾಜೂಕಿನ ಡ್ರಾಮಾ ಮಾಡುತ್ತಿದ್ದಾರೆ. ಎಪಿಎಂಸಿ ಲೈಸನ್ಸ್ ರದ್ದು ಮಾಡುವುದಾಗಿ ವರ್ತಕರಿಗೆ ನೊಟೀಸ್ ಕಳುಹಿಸಲಾಗಿದೆ. ಯಾವ ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳ ಲಾಗಿದೆ ಎಂಬು ದನ್ನು ಸರ್ಕಾರ ತಿಳಿಸಬೇಕು ಎಂದರು.

ಭೂ ಸುಧಾರಣಾ ಕಾಯ್ದೆ ಜಾರಿಯಿಂದ ಭೂಮಿ ಬೆಲೆ ಹೆಚ್ಚಾಗಿದೆ. ಹಣವಂತರು ಭೂಮಿ ಖರೀದಿಸ ಲಾರಂಭಿಸಿದ್ದಾರೆ. ಇತ್ತ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲು ರೆವಿನ್ಯೂ ಇಲಾಖೆಯ ನೋಂದಣಿ ಶುಲ್ಕ ಹೆಚ್ಚಿಸಲಾಗಿದೆ. ಈ ವರ್ಷಾಂತ್ಯಕ್ಕೆ 35 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ನೋಂದಣಿ ಇಲಾಖೆ ತೆರಿಗೆ ಹಣ ಸಂಗ್ರಹಕ್ಕಾಗಿ ಸಿದ್ದರಾಮಯ್ಯ ರೈತರನ್ನು ಬಲಿ ಕೊಡಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು. ಕೃಷಿ  ಭೂಮಿ ಕಾರ್ಪೊರೇಟ್ ಕಂಪನಿಗಳ ಕೈಗೆ ಸಿಕ್ಕರೆ ತೀವ್ರ ಅಪಾಯ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ತಾವು ಮಾತುಕೊಟ್ಟಂತೆ ಕೃಷಿ ಕಾಯ್ದೆ ವಾಪಾಸ್ ಪಡೆಯಬೇಕು. ಐದು ಗ್ಯಾರಂಟಿ ಕೊಟ್ಟಿರುವ ಸಿದ್ಧರಾಮಯ್ಯ ರೈತರಿಗಾಗಿ ಏನೂ ಕೊಟ್ಟಿಲ್ಲ. ಬದಲಾಗಿ ಕೃಷಿಯಿಂದ ರೈತರನ್ನು ವಿಮುಖಗೊಳಿಸಲು ಹೊರಟಿದ್ದಾರೆ ಎಂದರು.

ಕೃಷಿ ಪಂಪ್‌ಸೆಟ್‌ಗಳ ಅಕ್ರಮ – ಸಕ್ರಮದಡಿ ನೀಡುತ್ತಿದ್ದ ಟ್ರಾನ್ಸ್‌ಫಾರಂ, ಕಂಬ, ವೈರ್ ಇತರೆ ಉಪಕರಣ ನೀಡುವುದನ್ನು ಸರ್ಕಾರ ರದ್ದುಗೊಳಿಸಿದ್ದು, ರೈತರ ಹಿತದೃಷ್ಟಿಯಿಂದ ಈ ಆದೇಶವನ್ನೂ ಕೂಡಲೇ ಹಿಂಪಡೆಯಬೇಕು ಎಂದು  ಇದೇ ವೇಳೆ ಚಂದ್ರಶೇಖರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಎನ್. ಬಸವರಾಜ್ ದಾಗಿನಕಟ್ಟೆ, ಮಂಡಲೂರು ವಿಶ್ವನಾಥ್, ಕರೇಕಟ್ಟಿ ಕರೀಮುಲ್ಲಾ, ಕಾಳೇಶ್ ಯಲ್ಲೋದಹಳ್ಳಿ ಇತರರು ಉಪಸ್ಥಿತರಿದ್ದರು.

error: Content is protected !!