ದಾವಣಗೆರೆ, ಡಿ.3- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಎನ್.ಆರ್.ಎಲ್.ಎಂ ಯೋಜನೆಯಡಿ ರಚಿಸಲ್ಪಟ್ಟ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ನಗರದ ಜಯದೇವ ವೃತ್ತದಲ್ಲಿ ಆಯೋಜಿಸಲಾಗಿದ್ದ ಲಿಂಗತ್ವ ದೌರ್ಜನ್ಯ ಅಭಿಯಾನ ಕುರಿತ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.
ನಮ್ಮ ದೇಶ ಪುರುಷ ಪ್ರಧಾನ ಸಮಾಜವಾಗಿದ್ದು, ತಾಯಂದಿರಿಗೆ ಗಂಡು ಮಕ್ಕಳೆಂದರೆ ಎಲ್ಲಿಲ್ಲದ ಆಸಕ್ತಿಯಿಂದಾಗಿ ಇಂದಿಗೂ ಸಹ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇವೆ.
ಒಂದು ಹೆಣ್ಣು ನಮ್ಮ ಸಮಾಜದಲ್ಲಿ ಹುಟ್ಟಿನಿಂದ ಸಾಯುವವರೆಗೂ ಗಂಡು ಮಕ್ಕಳಿಗೆ ಒಂದು ವಿಶೇಷ ಪ್ರಾತಿನಿಧ್ಯ ನೀಡುವುದನ್ನು ನಾವು ಕಾಣಬಹುದು. ಮಹಿಳೆಯರು ಮೊದಲು ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದಾಗ ಮಾತ್ರ ಸಮಾಜ ಬದಲಾವಣೆಯಾಗಲು ಸಾಧ್ಯ ಎಂದರು.
ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಶಿಕ್ಷಣ, ರಾಜಕೀಯ, ಉದ್ಯೋಗ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಹೆಣ್ಣು ಮಕ್ಕಳಿಗೆ ಅನ್ವಯಿಸುವಂತೆ ಹಲವಾರು ಕಾಯ್ದೆ, ಕಾನೂನುಗಳು ಜಾರಿಯಲ್ಲಿವೆ. ಪ್ರತಿಜ್ಞಾ ವಿಧಿಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಲಿಂಗತ್ವ ದೌರ್ಜನ್ಯ ತಡೆಗೆ ಜಾಗೃತಿ ಜಾಥಾ: ಲಿಂಗ ತಾರತಮ್ಯ ತೊರೆಯಲಿ, ಸಮಾನತೆ ಬೆಳೆಯಲಿ, ನಮ್ಮ ನಡೆ ಸಮಾನತೆಯ ಕಡೆ, ಶಿಕ್ಷಣ ಎಲ್ಲರ ಹಕ್ಕು, ಹೆಣ್ಣು ಭ್ರೂಣಹತ್ಯೆ ಮಾಡದಿರಿ ಎಂಬ ಘೋಷ ವಾಕ್ಯಗಳೊಂದಿಗೆ ಜಾಥಾವು ಕೆ.ಇ.ಬಿ ಸರ್ಕಲ್, ವಿದ್ಯಾರ್ಥಿ ಭವನ, ಸಿ.ಜಿ ಹಾಸ್ಪಿಟಲ್ ರಸ್ತೆ ಮೂಲಕ ಸಾಗಿತು.
ಇದೇ ಸಂದರ್ಭದಲ್ಲಿ ಲಿಂಗತ್ವ ದೌರ್ಜನ್ಯ ತಡೆ ಕುರಿತಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಲ್ಲನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಕುಮಾರ್ ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರು ಉಪಸ್ಥಿತರಿದ್ದರು.